ಚೆನ್ನೈ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಕಾರ್ಯಾಚರಣೆಯು ಚದುರಂಗದ ಆಟವನ್ನೇ ಹೋಲುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಐಐಟಿ-ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸಶಸ್ತ್ರ ಪಡೆಗಳು ದಿಟ್ಟ ಹೋರಾಟ ನಡೆಸಿದ್ದವು. ನಾವು ಚದುರಂಗ ಆಟದಂತೆಯೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಚದುರಂಗ ಆಟದಲ್ಲಿ ಶತ್ರುಗಳ ಅಥವಾ ಎದುರಾಳಿಗಳ ಮುಂದಿನ ನಡೆ ಏನೆಂಬುವುದನ್ನು ತಿಳಿಯದೆಯೇ ಆಟ ಆಡುತ್ತೇವೆ. ಅದೇ ರೀತಿಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಎದುರಾಳಿ ದೇಶದ ಮುಂದಿನ ನಡೆ ಏನು? ಯಾವ ರೀತಿ ನಮ್ಮ ಮೇಲೆ ದಾಳಿ ಮಾಡಲು ಸಜ್ಜಾಗಿವೆ ಎಂಬುದನ್ನು ತಿಳಿಯದೆಯೇ, ನಾವು ಚದುರಂಗ ರೀತಿಯಲ್ಲಿಯೇ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ದ್ವಿವೇದಿ ಹೇಳಿದ್ದಾರೆ.
ಚದುರಂಗದಲ್ಲಿ ಎದುರಾಳಿ ಆಟಗಾರ ಹೇಗೆ ಆಡುತ್ತಾನೆ ಎಂಬುವುದು ತಿಳಿಯದೆಯೇ ಹೇಗೆ ಆಡುತ್ತೇವೆಯೋ ಅದೇ ರೀತಿ ಸಿಂಧೂರ ಕಾರ್ಯಾಚರಣೆ ನಡೆಸಲಾಯಿತು. ನಮ್ಮನ್ನು ರಕ್ಷಿಸಿಕೊಳ್ಳುವ, ದೇಶದ ಹಿತಕ್ಕಾಗಿ ನಾವು ಕಾರ್ಯಾಚರಣೆ ಮಾಡಬೇಕಾಯಿತು. ಜೀವನದಲ್ಲಿಯೂ ಹಾಗೆ ಎಂದು ದ್ವಿವೇದಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್, ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.