ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳ ದೃಶ್ಯ
ಚಿತ್ರ ಕೃಪೆ: X/@AN
ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಲಷ್ಕರ್-ಎ-ತಯಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದ 9 ನೆಲೆಗಳ ಮೇಲೆ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆ ನಡೆಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಾಚರಣೆಯನ್ನು ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಸಲಾಯಿತು. ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗಾಗಿ ಕಾರ್ಯಾಚರಣೆ ನಡೆಸಲಾಯಿತು.
ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ. ನಾಗರಿಕರಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದಿದ್ದಾರೆ.
ಪಾಕಿಸ್ತಾನದ ಬಹಾವಲ್‌ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಎಲ್‌ಇಟಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿರುವುದನ್ನು ಭದ್ರತಾ ಪಡೆಗಳು ಖಚಿತಪಡಿಸಿವೆ.
ಇದರ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಜತೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಎಸ್ಎಫ್ ಮಹಾನಿರ್ದೇಶಕರ ಜೊತೆ ಶಾ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಬಿಎಸ್‌ಎಫ್ ಮಹಾನಿರ್ದೇಶಕರಿಗೆ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಭಾರತದ ವಿರುದ್ಧ ಪಾಕ್ ಪ್ರತಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಮಾಹಿತಿ ಇರುವುದಾಗಿ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.