ನವದೆಹಲಿ: ‘ಆಪರೇಷನ್ ಸಿಂಧೂರ’ದ ವೇಳೆ ಪಾಕಿಸ್ತಾನದ ಕನಿಷ್ಠ ಐದು ಯುದ್ಧ ವಿಮಾನ ಮತ್ತು ಒಂದು ದೊಡ್ಡ ಗಾತ್ರದ ಸೇನಾ ವಿಮಾನವನ್ನು ಹೊಡೆದುರುಳಿಸಿದ್ದೇವೆ’ ಎಂದು ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಶನಿವಾರ ಹೇಳಿದರು.
‘ಸಿಂಧೂರ’ ಕಾರ್ಯಚರಣೆಯು ನಡೆದು ಮೂರು ತಿಂಗಳ ಬಳಿಕ, ಭಾರತವು ಇದೇ ಮೊದಲ ಬಾರಿಗೆ ಇಂಥದ್ದೊಂದು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ.
ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಡೆದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಕಾತ್ರೆ ಅವರ ಸ್ಮರಣಾರ್ಥ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಎ.ಪಿ. ಸಿಂಗ್ ಅವರು ಮಾತನಾಡಿದರು. ಭಾರತದ ವಾಯು ಸೇನೆಯು ನಡೆಸಿದ ಕಾರ್ಯಾಚರಣೆಯ ಉಪಗ್ರಹ ಚಿತ್ರಗಳನ್ನೂ ಪ್ರದರ್ಶಿಸಿದರು.
‘ರಷ್ಯಾ ನಿರ್ಮಿತ ‘ಎಸ್–400’ ವಾಯು ರಕ್ಷಣಾ ವ್ಯವಸ್ಥೆ ಮತ್ತು ನಮ್ಮ ಯುದ್ಧವಿಮಾನಗಳ ಮೂಲಕ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆವು. ನೆಲ ಮಟ್ಟದಿಂದ ಆಗಸದಲ್ಲಿನ ಗುರಿಗೆ 300 ಕಿ.ಮೀ. ದೂರದಿಂದ ದಾಳಿ ನಡೆಸಿ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವುದು ಇದೇ ಮೊದಲು’ ಎಂದೂ ಹರ್ಷ ವ್ಯಕ್ತಪಡಿಸಿದರು.
‘ನಮ್ಮ ದಾಳಿಯಿಂದಾಗಿ ಜಕೋಬಾಬಾದ್ ವಾಯುನೆಲೆಗೆ ಅತಿ ಹೆಚ್ಚು ಹಾನಿಯಾಗಿದೆ. ಎಫ್–16 ಯುದ್ಧವಿಮಾನದ ಹ್ಯಾಂಗರ್ (ನಿಲುಗಡೆ ಪ್ರದೇಶ) ಅರ್ಧದಷ್ಟು ನಾಶವಾಗಿದೆ. ಕೆಲವು ಯುದ್ಧವಿಮಾನಗಳು ವಾಯುನೆಲೆಯೊಳಗೆ ಇದ್ದವು. ಇವುಗಳಿಗೂ ಹಾನಿಯಾಗಿದೆ. ಮುರೀದ್ ಮತ್ತು ಚಕ್ಲಾಲ ವಾಯುನೆಲೆಗಳಿಗೆ ಹಾನಿಯಾಗಿದೆ’ ಎಂದರು.
ಪಾಕ್‌ನಲ್ಲಿ ಯಾವುದೆಲ್ಲಾ ನಾಶ
* ಆರು ರೆಡಾರ್‌ಗಳು (ಇದರಲ್ಲಿ ಕೆಲವು ದೊಡ್ಡ ಗಾತ್ರದವು, ಕೆಲವು ಸಣ್ಣ ಗಾತ್ರದವು)
* ವಾಯು ದಾಳಿ ತಡೆ ವ್ಯವಸ್ಥೆ ಮತ್ತು ಸರ್ಗೋದಾ ಮತ್ತು ರಹೀಮ್‌ಯಾರ್ ಖಾನ್ ವಾಯುನೆಲೆಯಲ್ಲಿನ ರನ್‌ವೇ
* ಸುಕೂರ್, ಬೊಲಾರಿ ಮತ್ತು ಜಕೋಬಾಬಾದ್ ವಾಯುನೆಲೆಯ ಹ್ಯಾಂಗರ್
ಪಾಕಿಸ್ತಾನದ ದಾಳಿಯಿಂದ ಶ್ರೀನಗರ ಆವಂತಿಪುರ ಮತ್ತು ಅದಂಪುರ ವಾಯುಕೇಂದ್ರ ತುಸು ಹಾನಿಯಾಗಿದೆ. ದೊಡ್ಡ ಪ್ರಮಾಣದ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಡಿಆರ್‌ಡಿಒಗೆ ನೀಡಿದ್ದೇವೆಎ.ಪಿ. ಸಿಂಗ್ ವಾಯುಪಡೆಯ ಮುಖ್ಯಸ್ಥ
ಭಾರತದ ದಾಳಿಯಿಂದ ಒಂದೇ ಒಂದು ಪಾಕಿಸ್ತಾನದ ಯುದ್ಧ ವಿಮಾನಕ್ಕೆ ಹಾನಿಯಾಗಿಲ್ಲ ಅಥವಾ ಯುದ್ಧ ವಿಮಾನ ನಾಶವಾಗಿಲ್ಲ. ಈ ಮೂರು ತಿಂಗಳಲ್ಲಿ ಒಮ್ಮೆಯೂ ಇಂಥ ಮಾಹಿತಿಯನ್ನು ನೀಡಲಾಗಿಲ್ಲ. ಕಾರ್ಯಾಚರಣೆ ನಡೆದ ಬಳಿಕವೇ ನಾವು ಎಲ್ಲ ಮಾಹಿತಿ ನೀಡಿದ್ದೆವುಖ್ವಾಜಾ ಆಸಿಫ್ ಪಾಕಿಸ್ತಾನದ ರಕ್ಷಣಾ ಸಚಿವ
‘ಪ್ರಧಾನಿ ಯಾಕೆ ಕಾರ್ಯಾಚರಣೆ ನಿಲ್ಲಿಸಿದರು’
ಏರ್‌ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಹೊಸದೊಂದು ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ. ಈ ಮಾಹಿತಿ ತಿಳಿದ ಬಳಿಕ ಪ್ರಧಾನಿ ಮೋದಿ ಅವರು ಯಾಕಾಗಿ ಆಪರೇಷನ್ ಸಿಂಧೂರವನ್ನು ತಕ್ಷಣವೇ ನಿಲ್ಲಿಸಿದರು ಎಂದು ಆಶ್ಚರ್ಯವಾಗುತ್ತದೆ. ಪ್ರಧಾನಿ ಅವರ ಮೇಲೆ ಎಲ್ಲಿಂದ ಒತ್ತಡ ಬಂತು ಮತ್ತು ಯಾಕಾಗಿ ಅವರು ಅಷ್ಟು ಬೇಗ ಶರಣಾದರು ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
‘ರಾಜಕೀಯ ಇಚ್ಛಾಶಕ್ತಿ ಇತ್ತು’
‘ಸೇನಾ ಕಾರ್ಯಚರಣೆ್ಗೆ ಯಾವುದೇ ರೀತಿಯ ನಿರ್ಬಂಧ ಇರಲಿಲ್ಲ ಮತ್ತು ಸ್ಪಷ್ಟ ನಿರ್ದೇಶನ ನೀಡಲಾಗಿತ್ತು. ರಾಜಕೀಯ ಇಚ್ಛಾಶಕ್ತಿ ಇದ್ದ ಕಾರಣಕ್ಕೆ ಈ ಕಾರ್ಯಾಚರಣೆ ಯಶಸ್ಸು ಕಂಡಿತು. ನಮಗೆ ಯಾವುದೇ ರೀತಿಯ ನಿರ್ಬಂಧ ಇತ್ತು ಎಂದರೆ ಅದು ನಮಗೆ ನಾವೇ ಹಾಕಿಕೊಂಡಿದ್ದ ನಿರ್ಬಂಧವಾಗಿತ್ತು’ ಎಂದು ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹೇಳಿದರು. ‘ಸಂಘರ್ಷವು ತೀವ್ರಗೊಳ್ಳಬಾರದು ಎನ್ನುವ ಕಾರಣಕ್ಕೆ ಕೆಲವು ಸ್ಥಳಗಳು ಅಥವಾ ಪ್ರದೇಶಗಳ ಮೇಲೆ ದಾಳಿ ನಡೆಸಬಾರದು ಎಂಬ ರೀತಿಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ನಮ್ಮ ಕಾರ್ಯಾಚರಣೆಯು ಹೀಗೆಯೇ ಇರಬೇಕು ಎಂದು ನಾವು ಯೋಜನೆ ರೂಪಿಸಿಕೊಂಡಿದ್ದೆವು. ಎಷ್ಟರ ಮಟ್ಟಿಗೆ ಸಂಘರ್ಷ ಮಾಡಬೇಕು ಯಾವಾಗ ಹಿಂದೆ ಸರಿಯಬೇಕು ಎಂದು ನಾವೇ ಯೋಜನೆ ರೂಪಿಸಿಕೊಂಡಿದ್ದೆವು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.