ನವದೆಹಲಿ: ‘ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿ ಕುಖ್ಯಾತ ಉಗ್ರರು ಸೇರಿದಂತೆ 100 ಮಂದಿ ಸತ್ತಿದ್ದಾರೆ. ಸತ್ತವರ ತಲೆ ಎಣಿಕೆ ನಡೆಯುತ್ತಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸರ್ವಪಕ್ಷ ಸಭೆಗೆ ತಿಳಿಸಿದರು.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಗುರುವಾರ ಇಲ್ಲಿ ಸುಮಾರು ಎರಡೂವರೆ ಗಂಟೆ ನಡೆದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ಕಾರ್ಯಾಚರಣೆಯ ಉದ್ದೇಶ ಈಡೇರಿದೆ. ಇನ್ನಷ್ಟು ಸಂಘರ್ಷ ನಡೆಸಿ ಪರಿಸ್ಥಿತಿ ಉಲ್ಭಣಗೊಳಿಸಲು ಭಾರತ ಬಯಸುವುದಿಲ್ಲ. ಆದರೆ, ಅದೇ ಸಮಯದಲ್ಲಿ ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಭಾರತ ಸೂಕ್ತ ಪ್ರತ್ಯುತ್ತರ ನೀಡಲಿದೆ’ ಎಂದು ಸಿಂಗ್ ತಿಳಿಸಿದರು ಎಂಬುದಾಗಿ ಮೂಲಗಳು ಹೇಳಿವೆ.
ಸಾವು–ನೋವುಗಳು ಸೇರಿದಂತೆ ಕಾರ್ಯಾಚರಣೆಯ ವಿವಿಧ ವಿವರಗಳ ಬಗ್ಗೆ ನಾಯಕರು ಮಾಹಿತಿ ಕೇಳಿದರು. ಆಗ ಸಿಂಗ್, ‘ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಈ ಹಂತದಲ್ಲಿ, ಸೇನೆಯ ಕಾರ್ಯಾಚರಣೆ ಕುರಿತ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಮಿಲಿಟರಿ ಕ್ರಮವನ್ನು ಸಂಪೂರ್ಣವಾಗಿ ಅನುಮೋದಿಸಿದ ಎಲ್ಲ ಪಕ್ಷಗಳ ನಾಯಕರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸರ್ಕಾರದ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್, ಎಐಎಂಐಎಂ, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ವಾಗ್ದಾನ ನೀಡಿದರು. ರಾಷ್ಟ್ರೀಯ ಭದ್ರತೆ ಹಾಗೂ ಗಡಿ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರತೀಯರ ಸುರಕ್ಷತೆ ಬಗ್ಗೆ ನಾಯಕರು ಕಳವಳ ವ್ಯಕ್ತಪಡಿಸಿದರು.
ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರದ ಜತೆಗೆ ಇದ್ದೇವೆ’ ಎಂದರು. ‘ಇದು ಸೂಕ್ಷ್ಮ ಸಮಯ. ದೇಶದ ಹಿತದೃಷ್ಟಿಯಿಂದ ವಿವರವಾದ ಪ್ರಶ್ನೆಗಳನ್ನು ಕೇಳಬಾರದು ಎಂದು ರಾಜನಾಥ್ ಮನವಿ ಮಾಡಿದರು’ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ಪ್ರಸ್ತುತ ಸಮಸ್ಯೆಯ ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ರಚನಾತ್ಮಕ ಮತ್ತು ಗಂಭೀರ ರೀತಿಯಲ್ಲಿ ಚರ್ಚೆ ನಡೆಸಲಾಯಿತು. ಆಪರೇಷನ್ ಸಿಂಧೂರ ಬಗ್ಗೆ ಎಲ್ಲ ನಾಯಕರಿಗೆ ರಕ್ಷಣಾ ಸಚಿವರು ಮಾಹಿತಿ ನೀಡಿದರು. ಪ್ರತಿಯೊಬ್ಬ ನಾಯಕರು ಜವಾಬ್ದಾರಿಯುತವಾಗಿ ಮತ್ತು ಪ್ರಬುದ್ಧತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು’ ಎಂದರು.
‘ನಾವು ಸರ್ಕಾರಗಳನ್ನು ರಚಿಸುವುದಕ್ಕಾಗಿ ಮಾತ್ರ ರಾಜಕೀಯ ಮಾಡುವುದಿಲ್ಲ, ರಾಷ್ಟ್ರವನ್ನು ನಿರ್ಮಿಸುವುದಕ್ಕೂ ಸಹ ರಾಜಕೀಯ ಮಾಡುತ್ತೇವೆ’ ಎಂದು ಸಿಂಗ್ ಹೇಳಿದ್ದನ್ನು ರಿಜಿಜು ಉಲ್ಲೇಖಿಸಿದರು.
ಅಮಿತ್ ಶಾ, ಜೆ.ಪಿ. ನಡ್ಡಾ, ಎಸ್. ಜೈಶಂಕರ್, ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು (ಎಲ್ಲರೂ ಬಿಜೆಪಿ), ಚಿರಾಗ್ ಪಾಸ್ವಾನ್ (ಎಲ್‌ಜೆಪಿ-ಆರ್‌ವಿ), ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ (ಇಬ್ಬರೂ ಕಾಂಗ್ರೆಸ್), ಟಿ.ಆರ್. ಬಾಲು (ಡಿಎಂಕೆ), ಲಾವು ಕೃಷ್ಣ ದೇವರಾಯಲು (ಟಿಡಿಪಿ), ಸಂಜಯ್ ಝಾ (ಜೆಡಿಯು), ಜಾನ್ ಬ್ರಿಟ್ಟಾಸ್ (ಸಿಪಿಎಂ), ಅಸಾದುದ್ದೀನ್ ಓವೈಸಿ (ಎಐಎಂಐಎಂ), ಪಿ.ಸಿ. ಗುಪ್ತಾ (ಆರ್‌ಜೆಡಿ), ಪ್ರಫುಲ್ ಪಟೇಲ್ (ಎನ್‌ಸಿಪಿ), ಶ್ರೀಕಾಂತ್ ಶಿಂದೆ (ಶಿವಸೇನಾ), ಸಂಜಯ್ ರಾವತ್ (ಶಿವಸೇನಾ-ಯುಬಿಟಿ), ಸಂಜಯ್ ಸಿಂಗ್ (ಎಎಪಿ) ಮತ್ತು ಸುಪ್ರಿಯಾ ಸುಳೆ (ಎನ್‌ಸಿಪಿ-ಶರದ್ ಪವಾರ್ ಬಣ) ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.