ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ:
ನವದೆಹಲಿ: ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ 9 ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಮಂಗಳವಾರ ತಡರಾತ್ರಿ ಸೇನಾ ಕಾರ್ಯಾಚರಣೆ ನಡೆಸಿದೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದನ ದಾಳಿಗೆ ಪ್ರತೀಕಾರವಾಗಿ ಭಾರತ ಈ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.
‘ಆಪರೇಷನ್ ಸಿಂಧೂರ’ ಕುರಿತು ಮಾಧ್ಯಮಗಳಿಗೆ ಸಂಕ್ಷಿಪ್ತ ವರದಿಯನ್ನು ಭಾರತೀಯ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ನೀಡಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ....
ಕರ್ನಲ್ ಸೋಫಿಯಾ ಖುರೇಷಿ
ಗುಜರಾತ್‌ನ ಮೂಲದವರಾದ ಕರ್ನಲ್ ಸೋಫಿಯಾ ಖುರೇಷಿ ಅವರು ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾರೆ. ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಪತಿ ಕೂಡ ಸೇನಾಧಿಕಾರಿಯಾಗಿದ್ದಾರೆ.
1997ರಲ್ಲಿ ಎಂ.ಎಸ್. ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಸೋಫಿಯಾ ಅವರಿಗೆ ತಮ್ಮ ಅಜ್ಜನಂತೆ ಸೇನೆಯಲ್ಲಿ ಕೆಲಸ ಮಾಡಬೇಕಂಬ ಆಸೆ ಚಿಗುರಿತ್ತು. ಅದರಂತೆಯೇ ಅವರು ಭಾರತೀಯ ಸೇನೆ ಸೇರಿದರು.
ಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಅಧಿಕಾರಿಯಾಗಿರುವ ಅವರು, ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯ ಮುಂದಾಳತ್ವವನ್ನು ವಹಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2016ರಲ್ಲಿ 'ಎಕ್ಸರ್ಸೈಸ್ ಫೋರ್ಸ್ 18' ರಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದರು. ಇದು ಭಾರತದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತು ಆಗಿತ್ತು. ಭಾಗವಹಿಸಿದ್ದ 18 ತುಕಡಿಗಳಲ್ಲಿ ಸೋಪಿಯಾ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್
ಆಕಾಶದ ತುಂಬ ಸ್ವಚ್ಛಂದವಾಗಿ ಹಾರಾಡುವ ಕನಸು ಕಂಡಿದ್ದ ಪುಟ್ಟ ಹುಡುಗಿ ಅವಳು. ಹಾರಬೇಕೆಂಬ ಕನಸಿಗೆ ರೆಕ್ಕೆ ಕಟ್ಟಿದ ಹಾಗೆ 'ಆಕಾಶದ ಮಗಳು' ಎಂಬರ್ಥದ ಹೆಸರು ಅವಳದು. 'ವ್ಯೋಮಿಕಾ'
ಹೌದು, ಭಾರತೀಯ ವಾಯುಸೇನಾ ಪಡೆಯ ವಿಶೇಷ ಹೆಲಿಕಾಪ್ಟರ್‌ನ ಪೈಲಟ್ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪೈಲಟ್ ಆಗಿ ಕನಸು ಸಾಧಿಸಿದ ಕಥೆಯಿದು. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಸೇರಿದ್ದ ವ್ಯೋಮಿಕಾ, ನಂತರದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 2019ರ ಡಿಸೆಂಬರ್ 18ರಂದು ಸಶಸ್ತ್ರ ಪಡೆ ಸೇರಿದ ಅವರು, ತಮ್ಮ ಕುಟುಂಬದಲ್ಲಿಯೇ ಈ ಸಾಧನೆ ಮಾಡಿದ ಮೊದಲನೇ ಸದಸ್ಯೆ ಎನಿಸಿಕೊಂಡರು. ನಂತರ ಅವರನ್ನು ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜಿಸಲಾಯಿತು.
ವ್ಯೋಮಿಕಾ ಈಗ ಅನುಭವಿ ಹೆಲಿಕಾಪ್ಟರ್ ಪೈಲೆಟ್ ಎನಿಸಿಕೊಂಡಿದ್ದಾರೆ. 2,500 ಗಂಟೆಗಳಿಗೂ ಹೆಚ್ಚು ಸಮಯ ಯುದ್ಧ ವಿಮಾನಗಳ ಹಾರಾಟ ನಡೆಸಿದ್ದಾರೆ. ದುರ್ಗಮ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲೂ ಹೆಲಿಕಾಪ್ಟರ್ ಹಾರಾಟ ನಡೆಸಿರುವ ಅನುಭವ ವ್ಯೋಮಿಕಾರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.