ADVERTISEMENT

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಎಬಿಪಿ–ಸಿವೋಟರ್ ಸಮೀಕ್ಷೆ

ಶೆಮಿಜ್‌ ಜಾಯ್‌
Published 19 ಅಕ್ಟೋಬರ್ 2019, 6:08 IST
Last Updated 19 ಅಕ್ಟೋಬರ್ 2019, 6:08 IST
2014ರಲ್ಲಿ ಹರಿಯಾಣದಲ್ಲಿ ಬಿಜೆಪಿ 47 ಸ್ಥಾನ ಗಳಿಸಿತ್ತು
2014ರಲ್ಲಿ ಹರಿಯಾಣದಲ್ಲಿ ಬಿಜೆಪಿ 47 ಸ್ಥಾನ ಗಳಿಸಿತ್ತು   

ನವದೆಹಲಿ:ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯೇ ಜಯಗಳಿಸಲಿದೆ ಎಂದು ಎಬಿಪಿ–ಸಿವೋಟರ್ ಸಮೀಕ್ಷೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳ ಪೈಕಿ 194ರಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಗೆ ಗೆಲುವಾಗಲಿದೆ. ಹರಿಯಾಣದ 90 ಕ್ಷೇತ್ರಗಳ ಪೈಕಿ 83ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ, ಹರಿಯಾಣದಲ್ಲಿ 2014ರ ಚುನಾವಣೆಯಲ್ಲಿ 15 ಸ್ಥಾನ ಜಯಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 3 ಸ್ಥಾನ ಗೆಲ್ಲಲಿದೆ. ಉಳಿದ 4 ಸ್ಥಾನ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಪಾಲಾಗಲಿದೆ. 2014ರಲ್ಲಿ ಬಿಜೆಪಿ 47 ಸ್ಥಾನ ಗಳಿಸಿದ್ದು,ಐಎನ್‌ಎಲ್‌ಡಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ನಾಲ್ವರುಐಎನ್‌ಎಲ್‌ಡಿ ಶಾಸಕರು ಬಿಜೆಪಿ ಸೇರಿದ್ದರು.

ಮಹಾರಾಷ್ಟ್ರದಲ್ಲಿ 2014ರಲ್ಲಿ ಬಿಜೆಪಿ ಮತ್ತು ಶಿವಸೇನಾ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಬಿಜೆಪಿ 122 ಹಾಗೂ ಶಿವಸೇನಾ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಉಭಯ ಪಕ್ಷಗಳು ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದರೂ ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪವಷ್ಟೇ ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್–ಎನ್‌ಸಿಪಿ ಮೈತ್ರಿಯು 86 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಉಭಯ ಪಕ್ಷಗಳ ಕೆಲವು ಮಂದಿ ನಾಯಕರು ಇತ್ತೀಚೆಗೆ ಬಿಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, 24ರಂದು ಫಲಿತಾಂಶ ಪ್ರಕಟವಾಗಲಿದೆ.

ಸಮೀಕ್ಷೆ ಫಲಿತಾಂಶ

ಮಹಾರಾಷ್ಟ್ರ – ಒಟ್ಟು ಸ್ಥಾನ 288

ಬಿಜೆಪಿ–ಶಿವಸೇನಾ – 194

ಕಾಂಗ್ರೆಸ್–ಎನ್‌ಸಿಪಿ – 86

ಇತರ – 8

ಹರಿಯಾಣ - 90 ಸ್ಥಾನ

ಬಿಜೆಪಿ – 83

ಕಾಂಗ್ರೆಸ್ – 3

ಇತರ – 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.