ADVERTISEMENT

ಮತಯಂತ್ರಕ್ಕೆ ವಿವಿಪ್ಯಾಟ್ ತಾಳೆ ಹೆಚ್ಚಿಸುವ ಮನವಿ: ಸುಪ್ರೀಂನಲ್ಲಿ ಇಂದು ವಿಚಾರಣೆ

ಅರ್ಜಿಗೆ ಸಹಿ ಹಾಕಿರುವ ಪ್ರತಿಪಕ್ಷಗಳ ಎಲ್ಲ ನಾಯಕರು ಹಾಜರಿರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 8:32 IST
Last Updated 7 ಮೇ 2019, 8:32 IST
   

ನವದೆಹಲಿ:ಲೋಕಸಭೆ ಚುನಾವಣೆಯ ಮತ ಎಣಿಕೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ ಶೇ 50ರಷ್ಟು ವಿವಿಪ್ಯಾಟ್‌ ಮತಚೀಟಿಗಳನ್ನು ಮತಯಂತ್ರಗಳಿಗೆ ತಾಳೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಅರ್ಜಿಗೆ ಸಹಿ ಹಾಕಿರುವ ಪ್ರತಿಪಕ್ಷಗಳ ಎಲ್ಲನಾಯಕರು ವಿಚಾರಣೆ ವೇಳೆ ಹಾಜರಿರಲಿದ್ದಾರೆ ಎನ್ನಲಾಗಿದೆ.

ವಿವಿಪ್ಯಾಟ್‌ ಮತಚೀಟಿಗಳನ್ನು ಮತಯಂತ್ರಗಳಿಗೆ ತಾಳೆ ಮಾಡುವ ವಿಚಾರದಲ್ಲಿಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಪಕ್ಷಗಳು ಹಿಂದೆಯೂ ಈ ಮನವಿ ಮಾಡಿದ್ದವು. ಆ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು, ತಾಳೆಮಾಡುವ ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಫಲಿತಾಂಶ ಘೋಷಣೆಗೆ ವಿಳಂಬವಾಗಬಹುದು ಎಂದಿತ್ತು. ಈ ಕಾರಣಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಮತಯಂತ್ರಕ್ಕೆ ತಾಳೆ ಮಾಡುವಂತೆ ಏಪ್ರಿಲ್‌ 8ರಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ADVERTISEMENT

ಆದರೆ,ಮೊದಲ 3 ಹಂತಗಳ ಚುನಾವಣೆಯಲ್ಲಿ ಅನೇಕ ಮತ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ದೂರು ದಾಖಲಾಗಿವೆ. ಹೀಗಾಗಿಏಪ್ರಿಲ್ 8ರ ಸೂಚನೆಯನ್ನು ಮರುಪರಿಶೀಲಿಸುವಂತೆ ಪ್ರತಿಪಕ್ಷಗಳು ಪುನಃಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎನ್‌ಸಿ‍ಪಿ ನಾಯಕ ಶರದ್ ಪವಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಸೇರಿ 21 ಪಕ್ಷಗಳ ನಾಯಕರುಮರುಪರಿಶೀಲನಾ ಅರ್ಜಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.