ADVERTISEMENT

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ವಿಪಕ್ಷಗಳ ಚಿಂತನೆ

ಪಿಟಿಐ
Published 14 ಫೆಬ್ರುವರಿ 2026, 16:03 IST
Last Updated 14 ಫೆಬ್ರುವರಿ 2026, 16:03 IST
<div class="paragraphs"><p>ಜ್ಞಾನೇಶ್ ಕುಮಾರ್</p></div>

ಜ್ಞಾನೇಶ್ ಕುಮಾರ್

   

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವಿರುದ್ಧದ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ವಿರೋಧ ಪಕ್ಷಗಳು ಮುಂದಾಗಿವೆ.

ಎಸ್‌ಐಆರ್‌ ವಿಚಾರ ಮುಂದಿಟ್ಟುಕೊಂಡು, ಚುನಾವಣಾ ಆಯೋಗದ ಮುಖ್ಯ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್‌ ಅವರನ್ನು ಪದಚ್ಯುತಗೊಳಿಸುವ ಸಲುವಾಗಿ ನೋಟಿಸ್‌ ಸಲ್ಲಿಸುವ ಕುರಿತು ವಿರೋಧ ಪಕ್ಷಗಳು ಪರಿಶೀಲನೆ ನಡೆಸುತ್ತಿವೆ.

ADVERTISEMENT

ಈ ಮೂಲಕ, ಏಪ್ರಿಲ್‌–ಮೇನಲ್ಲಿ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗೂ ಮುನ್ನ, ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಮೇಲೆ ಒತ್ತಡ ಹೆಚ್ಚಿಸುವುದು ಹಾಗೂ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಉದ್ದೇಶವು ವಿಪಕ್ಷ ಪಾಳಯದ ಈ ನಡೆ ಹಿಂದಿರುವ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

ಸಿಇಸಿ ಜ್ಞಾನೇಶ ಕುಮಾರ್‌ ವಿರುದ್ಧ ಕಳೆದ ವರ್ಷ ಸಂಸತ್‌ನ ಮುಂಗಾರು ಅಧಿವೇಶನದಲ್ಲಿಯೇ ನೋಟಿಸ್‌ ಸಲ್ಲಿಸುವುದಾಗಿ ಹೇಳಿದ್ದ ವಿರೋಧ ಪಕ್ಷಗಳು, ನಂತರ ಅಂಥ ಯಾವ ಕ್ರಮಕ್ಕೂ ಮುಂದಾಗಲಿಲ್ಲ.

ಇನ್ನೊಂದೆಡೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲ ಇದೆ. ಹೀಗಾಗಿ, ವಿರೋಧ ಪಕ್ಷಗಳ ಯಾವುದೇ ನಡೆಯನ್ನು ವಿಫಲಗೊಳಿಸಲು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ.

‘ಚುನಾವಣೆಯೇ ಅಡ್ಡಿ’: ಸಿಇಸಿ ವಿರುದ್ಧ ಒಂದು ವೇಳೆ ನೋಟಿಸ್‌ ಸಲ್ಲಿಸಿದರೂ, ಅದು ಮಾರ್ಚ್ 9ರಿಂದ ಆರಂಭವಾಗಲಿರುವ ಬಜೆಟ್‌ ಅಧಿವೇಶನದ ಎರಡನೇ ಹಂತದಲ್ಲಿಯೇ ಮಂಡನೆಯಾಗುವುದು. ಅಲ್ಲದೇ, 14 ದಿನಗಳ ಮುಂಚೆ ನೋಟಿಸ್ ಸಲ್ಲಿಸಬೇಕಾಗುತ್ತದೆ.

ಒಂದು ವೇಳೆ, ನೋಟಿಸ್‌ ಸಲ್ಲಿಸಿದರೂ, ಅದು ಚರ್ಚೆಗೆ ಬರುವ ಹೊತ್ತಿಗೆ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿ, ಪ್ರಚಾರವೂ ನಡೆದಿರುತ್ತದೆ. ಇಂತಹ ಸಂದರ್ಭದಲ್ಲಿ, ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳಿಗೆ ಕಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಟಿಎಂಸಿ ಬೆಂಬಲಿಸುವುದೇ?’

ಸಿಇಸಿ ಪದಚ್ಯುತಿಗೆ ಸಂಬಂಧಿಸಿ ನೋಟಿಸ್‌ ಸಲ್ಲಿಸುವುದಕ್ಕೆ ಟಿಎಂಸಿಯಿಂದ ಬೆಂಬಲ ಸಿಗುವುದೇ? ಎಂಬ ಚರ್ಚೆಯೂ ವಿಪಕ್ಷಗಳ ಪಾಳಯದಲ್ಲಿ ನಡೆಯುತ್ತಿದೆ. ಎಸ್‌ಐಆರ್‌ ವಿಚಾರವಾಗಿ ಸಿಇಸಿ ವಿರುದ್ಧ ಬಜೆಟ್‌ ಅಧಿವೇಶನದ ಮೊದಲ ಹಂತದಲ್ಲಿ ನೋಟಿಸ್‌ ಸಲ್ಲಿಸಲು ಟಿಎಂಸಿ ಮುಂದಾಗಿತ್ತು. ಇಂತಹ ನಡೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ಇದರ ಬದಲಾಗಿ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಪದಚ್ಯುತಿ ವಿಚಾರವಾಗಿ ನೋಟಿಸ್‌ ಸಲ್ಲಿಸಿದವು. ಈ ವಿಚಾರದಲ್ಲಿ ಭಿನ್ನ ನಿಲುವು ತಳೆದ ಟಿಎಂಸಿ ಈ ನೋಟಿಸ್‌ಗೆ ಸಹಿ ಹಾಕಿಲ್ಲ. ಈಗ ಸಿಇಸಿ ವಿರುದ್ಧದ ನೋಟಿಸ್‌ ಟಿಎಂಸಿ ಸಹಿ ಹಾಕುವುದೇ ಎಂಬ ಚರ್ಚೆ ನಡೆಯುತ್ತಿದೆ.

ಮತ್ತಷ್ಟು ಒತ್ತಡ ಹೆಚ್ಚಿಸುವ ತಂತ್ರ

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಎಪ್‌ಸ್ಟೈನ್‌ ಫೈಲ್‌ಗಳು ಹಾಗೂ ಸೇನೆ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಪುಸ್ತಕ’ ವಿಚಾರವಾಗಿ ಎದ್ದಿರುವ ವಿವಾದಗಳಿಂದ ಕೇಂದ್ರ ಸರ್ಕಾರ ಟೀಕೆ ಎದುರಿಸುತ್ತಿದೆ. ಇಂಥ ಹೊತ್ತಲ್ಲೇ ಸಿಇಸಿ ವಿರುದ್ಧ ನೋಟಿಸ್‌ ಸಲ್ಲಿಸುವ ಮೂಲಕ ಬಿಜೆಪಿ ವಿರುದ್ಧದ ಸಂಕಥನವನ್ನು ಮತ್ತಷ್ಟು ಹರಳುಗಟ್ಟುವಂತೆ ಮಾಡುವ ಲೆಕ್ಕಾಚಾರ ಕೂಡ ವಿಪಕ್ಷಗಳದ್ದು.

ಸಮಾಜವಾದಿ ಪಕ್ಷದಲ್ಲೂ ಚಿಂತನೆ

ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಆರ್‌ ಬಳಿಕ ಅಂತಿಮಗೊಳ್ಳುವ ಮತದಾರರ ಪಟ್ಟಿಯ ಪ್ರಕಟವಾದ ಬಳಿಕ ತನ್ನ ಮುಂದಿನ ನಡೆ ಕುರಿತು ನಿರ್ಧರಿಸಲು ಸಮಾಜವಾದಿ ಪಕ್ಷ ತೀರ್ಮಾನಿಸಿದೆ. ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಎಸ್ಐಆರ್‌ ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆಯಲ್ಲಿನ ವ್ಯತ್ಯಾಸ 4.5 ಕೋಟಿಯಷ್ಟು ಎಂದು ಪಕ್ಷವು ಹೇಳುತ್ತಿದೆ. ಅಂತಿಮ ಪಟ್ಟಿಯಲ್ಲಿಯೂ  ಮತದಾರರ ಸಂಖ್ಯೆಯಲ್ಲಿ ಇಷ್ಟೇ ಅಂತರ ಕಂಡುಬಂದರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಪಕ್ಷದ ತೀರ್ಮಾನಿಸಿದೆ ಎಂದು ಸಮಾಜವಾದಿ ಪಕ್ಷದ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.