
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಖುಲಾಸೆ ಆಗಿರುವುದಕ್ಕೆ ವಿರೋಧ ಪಕ್ಷಗಳು ಭಿನ್ನ ನಿಲುವು ವ್ಯಕ್ತಪಡಿಸಿವೆ. ಈ ಮೂಲಕ ವಿಪಕ್ಷಗಳಲ್ಲಿನ ಗೊಂದಲ ಮತ್ತೊಮ್ಮೆ ಬಹಿರಂಗವಾಗಿದೆ.
‘ಇದು ಬಿಜೆಪಿಯ ಊಹಿಸಬಹುದಾದ ಸ್ಕ್ರಿಪ್ಟ್. ಗುಜರಾತ್ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿಯೇ ‘ಅನುಕೂಲಸಿಂಧು ಮಿತ್ರ’ರಿಗೆ ನೆರವಾಗುವ ತಂತ್ರ ಇದಾಗಿದೆ’ ಎಂದು ಕಾಂಗ್ರೆಸ್ ಜರಿದಿದೆ.
ಆದರೆ ಕಾಂಗ್ರೆಸ್‌ನ ಈ ಅಭಿಪ್ರಾಯಕ್ಕೆ ಅದರ ಮಿತ್ರ ಪಕ್ಷಗಳಾದ ಡಿಎಂಕೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ ಸಹಮತ ವ್ಯಕ್ತಪಡಿಸಿಲ್ಲ. ‘ಅಲ್ಪಾವಧಿಯ ರಾಜಕೀಯಕ್ಕಾಗಿ ತನಿಖಾ ಸಂಸ್ಥೆಗಳ ಸಮಗ್ರತೆಯನ್ನು ಅಡ ಇಡಬಾರದು’ ಎಂದು ಇತರ ವಿಪಕ್ಷಗಳು ಆಗ್ರಹಿಸಿವೆ.
‘ಕಾಂಗ್ರೆಸ್‌ಮುಕ್ತಗೊಳಿಸಲು ಯತ್ನ’:
ಎಎಪಿ ಮತ್ತು ಟಿಎಂಸಿಯನ್ನು ಉಲ್ಲೇಖಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಕಾಂಗ್ರಸ್ ಅನ್ನು ಸೋಲಿಸಲು ಮತ್ತು ಕಾಂಗ್ರೆಸ್‌ಮುಕ್ತ ಭಾರತಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ’ ಎಂದು ಟೀಕಿಸಿದ್ದಾರೆ.
‘ಬಿಜೆಪಿ ಒಂದು ರಾಜಕೀಯ ಪಕ್ಷದಂತೆ ನಡೆದುಕೊಳ್ಳುತ್ತಿಲ್ಲ. ಅದು ಆಕಾರ ಬದಲಿಸುವ ಸರ್ಪ, ಇಚ್ಛಾಧಾರಿ ನಾಗ... 12 ವರ್ಷಗಳ ಕಾಲ ಟಿಎಂಸಿ ವಿರುದ್ಧ ವಿಷ ಕಾರಿದ ಬಿಜೆಪಿ ಈಗ ಏನು ಮಾಡುತ್ತಿದೆ? ಮೋದಿ ಅವರೇ ಈಗ ಅದನ್ನು ಹೊಗಳುತ್ತಿದ್ದಾರೆ, ಅದೂ ಗೌರವದಿಂದ ಅಲ್ಲ, ಎಲ್ಲವೂ ಕಾಂಗ್ರೆಸ್ ಅನ್ನು ಮಣಿಸಲು’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧದ ಪ್ರಕರಣಗಳು ಮುನ್ನೆಲೆಗೆ:
‘ಚುನಾವಣೆಗಳು ಸಮೀಪಿಸುತ್ತಿವೆ. ಹೀಗಾಗಿ ಕಾಂಗ್ರೆಸ್ ನಾಯಕರ ವಿರುದ್ಧದ ಪ್ರಕರಣಗಳು ಇದ್ದಕ್ಕಿದ್ದಂತೆ ವೇಗ ಪಡೆದುಕೊಳ್ಳುತ್ತಿವೆ. ತಮಿಳುನಾಡು ಚುನಾವಣೆ ಬರುತ್ತಿರುವುದರಿಂದ ಈಗ ಪಿ. ಚಿದಂಬರಂ ಅವರ ವಿರುದ್ಧದ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದರ ನಡುವೆ ಗುಜರಾತ್ ಮತ್ತು ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇತರರಲ್ಲಿ ಅವರ ‘ಅನುಕೂಲಸಿಂಧು ಮಿತ್ರರ’ ವಿರುದ್ಧದ ಕ್ರಮಗಳು ಸದ್ದಿಲ್ಲದೆ ಕಣ್ಮರೆಯಾಗುತ್ತವೆ. ಇದು ಬಿಜೆಪಿಯ ನಾಟಕ. ಅದು ತನ್ನ ಸೇಡು ಮತ್ತು ಪ್ರಚಾರಕ್ಕಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಅವರು ದೂರಿದ್ದಾರೆ.
ಕಳೆದ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ‘ಇಂಡಿಯಾ’ ಮೈತ್ರಿಯಿಂದ ಎಎಪಿ ಹೊರಬಂದಿತ್ತು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ತನಿಖಾ ಸಂಸ್ಥೆಗಳ ಸಮಗ್ರತೆಯನ್ನು ಅಡ ಇಡಬಾರದು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಯಾವುದೇ ಆರೋಪವು ಸತ್ಯವನ್ನು ಮರೆಮಾಚುವಷ್ಟು ದೊಡ್ಡದಾಗಲು ಸಾಧ್ಯವಿಲ್ಲ. ನ್ಯಾಯಾಲಯದ ಈ ಆದೇಶವು ಬಿಜೆಪಿ ಪಾಲಿಗೆ ನೈತಿಕ ಮರಣದಂಡನೆಗಿಂತ ಕಡಿಮೆಯಿಲ್ಲ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
‘ಸೇಡಿನ ಉದ್ದೇಶ ಹೊಂದಿರುವ ಪ್ರಕರಣಗಳು ಹೀಗೇ ಆಗುತ್ತವೆ’ ಎಂದು ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಪ್ರತಿಕ್ರಿಯಿಸಿದ್ದಾರೆ.
‘ತನಿಖಾ ಸಂಸ್ಥೆಗಳನ್ನು ರಾಜಕೀಯ ಕತ್ತಿಗಳಂತೆ ಪ್ರಯೋಗಿಸಿದಾಗ ಮೊದಲಿಗೆ ಬಲಿಪಶುವಾಗುವುದು ನ್ಯಾಯ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
‘ವರ್ಷಗಳ ನೋವು, ಕಣ್ಣೀರಿನ ನಂತರ ಸತ್ಯ ಹೊರಹೊಮ್ಮುತ್ತದೆ. ಯಾವುದೇ ಸಾಕ್ಷ್ಯಾಧಾರ, ವಿಶ್ವಾಸಾರ್ಹ ಪುರಾವೆಗಳಿಲ್ಲದೆ ಯಾರನ್ನಾದರೂ ಜೈಲಿಗಟ್ಟುವುದು ಅಧಿಕಾರದ ದುರುಪಯೋಗ. ಅದು ಅತ್ಯಂತ ಅಪಾಯಕಾರಿ’ ಎಂದು ಅವರು ತಿಳಿಸಿದ್ದಾರೆ.
‘ವಿಪಕ್ಷ ನಾಯಕರನ್ನು ಬಂಧಿಸಿ, ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಬಿಜೆಪಿ ನಕಲಿ ಪ್ರಕರಣ ದಾಖಲಿಸಿದೆ. ಈ ನಕಲಿ ಪ್ರಕರಣಗಳಂತೆ ಮೋದಿ, ಶಾ ಸರ್ಕಾರವೂ ಶೀಘ್ರದಲ್ಲೇ ಪತನವಾಗಲಿದೆ’ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದ ಸಾಕೇತ್ ಗೋಖಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.