ADVERTISEMENT

ಸರ್ಕಾರದ ಮೇಲೆ ಮುಗಿಬೀಳಲು ಒಗ್ಗಟ್ಟಿನ ತಂತ್ರ

ಸಂಸತ್ತಿನಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ–ಚೀನಾ ಸೇನಾ ಸಂಘರ್ಷ: ಚರ್ಚೆಗೆ ವಿರೋಧ ಪಕ್ಷಗಳ ಬಿಗಿ ಪಟ್ಟು

ಪಿಟಿಐ
Published 14 ಡಿಸೆಂಬರ್ 2022, 16:18 IST
Last Updated 14 ಡಿಸೆಂಬರ್ 2022, 16:18 IST
   

ನವದೆಹಲಿ: ಅರುಣಾಚಲಪ್ರದೇಶದ ಗಡಿಯಲ್ಲಿ ಉಂಟಾಗಿರುವ ಭಾರತ ಮತ್ತು ಚೀನಾ ಸೇನಾ ಸಂಘರ್ಷದ ವಿಚಾರವು ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರವೂ ಪ್ರತಿಧ್ವನಿಸಿತು.

ಈ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿರುವ ವಿರೋಧ ಪಕ್ಷಗಳು ಇದಕ್ಕಾಗಿ ಒಗ್ಗಟ್ಟಿನ ತಂತ್ರ ರೂಪಿಸಿವೆ.

ಕಾಂಗ್ರೆಸ್‌, ಆರ್‌ಜೆಡಿ, ಡಿಎಂಕೆ, ಸಿಪಿಐ, ಸಿಪಿಐ (ಎಂ), ಆಮ್‌ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಜೆಡಿಯು, ಎನ್‌ಸಿಪಿ, ಶಿವಸೇನಾ (ಉದ್ಧವ್‌ ಬಣ), ಕೇರಳ ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫರೆನ್ಸ್‌, ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಐಯುಡಿಎಫ್‌), ಆರ್‌ಎಲ್‌ಡಿ, ಎಂಡಿಎಂಕೆ, ವಿಕೆಸಿ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದರು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ADVERTISEMENT

‘ಟಿಎಂಸಿ ಸಂಸದ ಸುದೀಪ್‌ ಬಂಡೋಪಾಧ್ಯಾಯ ಅವರು ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅನಾರೋಗ್ಯದ ಕಾರಣ ಸಭೆಗೆ ಹಾಜರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ನಮ್ಮ ಸಂಸದರು ಬದ್ಧರಾಗಿರಲಿದ್ದಾರೆ’ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಭಾರತ–ಚೀನಾ ಸೇನಾ ಸಂಘರ್ಷದ ಕುರಿತು ತುರ್ತು ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು. ಒಂದೊಮ್ಮೆ ಈ ಬೇಡಿಕೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಉಭಯ ಸದನಗಳ ಸದಸ್ಯರೂ ಸಭಾತ್ಯಾಗ ಮಾಡಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಚೀನಾ ಅತಿಕ್ರಮಣ ವಿಚಾರದ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಬೇಕು.ಭಾರತೀಯ ಯೋಧರ ಮನೋಬಲ ಕುಗ್ಗಿಸುವಂತಹ ಯಾವ ಅಂಶವೂ ಈ ಹೇಳಿಕೆಯಲ್ಲಿ ಇರದಂತೆ ಎಚ್ಚರ ವಹಿಸಬೇಕು ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ.

ಸಂಸತ್‌ ಭವನದ ಸಂಕೀರ್ಣದಲ್ಲಿ ಗುರುವಾರ ಮತ್ತೊಮ್ಮೆ ಸಭೆ ಸೇರಲಿರುವ ವಿರೋಧ ಪಕ್ಷಗಳ ಸಂಸದರು ತಮ್ಮ ಕಾರ್ಯತಂತ್ರದ ಕುರಿತು ಮತ್ತೊಮ್ಮೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

**

ಕಾಂಗ್ರೆಸ್‌, ಟಿಎಂಸಿ ಸಂಸದರಿಂದ ಸಭಾತ್ಯಾಗ

ಭಾರತ–ಚೀನಾ ಗಡಿ ಸಂಘರ್ಷದ ಕುರಿತ ಚರ್ಚೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ ಸಂಸದರು ಲೋಕಸಭೆಯಲ್ಲಿ ಬುಧವಾರ ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಭಾರತ–ಚೀನಾ ಗಡಿ ಬಿಕ್ಕಟ್ಟಿನ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. 1962ರಲ್ಲಿ ನಡೆದಿದ್ದ ಭಾರತ–ಚೀನಾ ಯುದ್ಧದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಅವಕಾಶ ಕೊಟ್ಟಿದ್ದನ್ನು ಪ್ರಸ್ತಾಪಿಸಿದರು. ಆಗ 165 ಸಂಸದರು ಮಾತನಾಡಿದ್ದಾಗಿಯೂ ಹೇಳಿದರು.

ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಹೇಳಿದ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪ ಮುಂದುವರಿಸಲು ಮುಂದಾದರು. ಆಗ ಕಾಂಗ್ರೆಸ್‌ ಮತ್ತು ಟಿಎಂಸಿ ಸಂಸದರು ಸ್ಪೀಕರ್‌ ನಿಲುವನ್ನು ಖಂಡಿಸಿ ಸದನದಿಂದ ಹೊರನಡೆದರು.

**

ರಾಜ್ಯಸಭೆಯಲ್ಲೂ ಸಭಾತ್ಯಾಗ

ಭಾರತ–ಚೀನಾ ಗಡಿ ಸಂಘರ್ಷದ ವಿಚಾರ ರಾಜ್ಯಸಭೆಯಲ್ಲೂ ಪ್ರಸ್ತಾಪವಾಯಿತು. ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸಂಸದರು ಪಟ್ಟು ಹಿಡಿದರು.

ಈ ಕುರಿತು ಮುಂಚಿತವಾಗಿ ಯಾರೂ ನೋಟಿಸ್‌ ನೀಡಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಉಪ ಸಭಾಪತಿ ಹರಿವಂಶ್‌ ಹೇಳಿದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವಾಗ ಅವರ ಮೈಕ್‌ನ ಸ್ವಿಚ್‌ ಆಫ್‌ ಮಾಡಲಾಯಿತು.

ಇದರಿಂದ ಕೆರಳಿದ ಸಂಸದರು ಸರ್ಕಾರದ ವಿರುದ್ಧ ಕೆಲ ಕಾಲ ಘೋಷಣೆಗಳನ್ನು ಕೂಗಿದರು. ಬಳಿಕ ಸದನದಿಂದ ಹೊರ ಹೋದರು.

**

ಸರ್ಕಾರವುಭಾರತ–ಚೀನಾ ಗಡಿ ಸಂಘರ್ಷ ಹಾಗೂ ಚೀನಾ ನಡೆಸುತ್ತಿರುವ ಅತಿಕ್ರಮಣದ ಕುರಿತ ಸಂಪೂರ್ಣ ಮಾಹಿತಿ ಒದಗಿಸಬೇಕು. ಹೀಗಾಗಿ ಚರ್ಚೆಗೆ ಅವಕಾಶ ಕೇಳುತ್ತಿದ್ದೇವೆ. ದೇಶ ಹಾಗೂ ಸೈನಿಕರ ಜೊತೆ ನಾವಿದ್ದೇವೆ

–ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.