ADVERTISEMENT

ಪಟ್ನಾದಲ್ಲಿ ವಿಪಕ್ಷಗಳ ಒಗ್ಗಟ್ಟಿನ ಮಂತ್ರ: ಜಂಟಿ ಕಾರ್ಯತಂತ್ರಕ್ಕೆ ಶಿಮ್ಲಾದಲ್ಲಿ ಸಭೆ

ಸುಗ್ರೀವಾಜ್ಞೆ ವಿರುದ್ಧ ಹೋರಾಟಕ್ಕೆ ‘ಕೈ’ ಬೆಂಬಲ ನೀಡದಿದ್ದರೆ ಮುಂದಿನ ಸಭೆಗೆ ಗೈರು: ಎಎಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 16:11 IST
Last Updated 23 ಜೂನ್ 2023, 16:11 IST
   

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ 15 ವಿರೋಧ ಪಕ್ಷಗಳು, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹಾಗೂ ಹೊಂದಾಣಿಕೆ ಸೂತ್ರದಡಿ ಕೆಲಸ ಮಾಡಲು ತೀರ್ಮಾನಿಸಿವೆ. ಮುಂದಿನ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಸಭೆ ಸೇರಲು ನಿರ್ಧರಿಸಿವೆ. 

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಅಲ್ಲಿನ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಪಟ್ನಾದಲ್ಲಿ ಶುಕ್ರವಾರ ಸಂಘಟಿಸಿದ್ದ ಸಭೆಯಲ್ಲಿ ವಿಪಕ್ಷಗಳ 32 ನಾಯಕರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಿದರು. ತಮ್ಮ ನಡುವಿನ ಅಭಿಪ್ರಾಯಭೇದಗಳನ್ನು ಮರೆತು ಸುಮಾರು 4 ತಾಸುಗಳ ಕಾಲ ಸುದೀರ್ಘವಾಗಿ ಸಮಾಲೋಚಿಸಿದರು. ಬಳಿಕ ಈ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಒಗ್ಗಟ್ಟಿನ ಮಂತ್ರ ಪಠಿಣಿಸಿದರು.

ಸಭೆ ಮುಗಿಸಿ ದೆಹಲಿಗೆ ವಾಪಸಾದ ಕೆಲವೇ ನಿಮಿಷಗಳಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಕಾಂಗ್ರೆಸ್‌ ಧೋರಣೆಯನ್ನು ಖಂಡಿಸಿ ಒಡಕಿನ ಮಾತುಗಳನ್ನೂ ಆಡಿದರು. ಕೇಂದ್ರದ ಸರ್ಕಾರದ ಕರಾಳ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ಪ್ರತಿಪಕ್ಷಗಳ ಮುಂದಿನ ಸಭೆಗೆ ಪಕ್ಷ ಭಾಗವಹಿಸುವುದು ಕಷ್ಟ ಎಂದು ವಿಪಕ್ಷಗಳ ಕೂಟಕ್ಕೆ ಎಎಪಿ ನಾಯಕರು ಎಚ್ಚರಿಕೆಯ ಸಂದೇಶ ರವಾನಿಸಿದರು. 

ADVERTISEMENT

ಪಟ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿತೀಶ್‌ ಕುಮಾರ್‌, ‘ಒಗ್ಗಟ್ಟಿನಿಂದ ಹೋರಾಡುವ ನಮ್ಮ ಯೋಜನೆಗೆ ಅಂತಿಮ ರೂಪ ನೀಡಲು ಕೆಲವೇ ದಿನಗಳಲ್ಲಿ ಇನ್ನೊಂದು ಸಭೆ ನಡೆಸುತ್ತೇವೆ’ ಎಂದು ಘೋಷಿಸಿದರು. 

‘17 ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಧರಿಸಿವೆ’ ಎಂದೂ ತಿಳಿಸಿದರು. ‘ನಾವೆಲ್ಲ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿದ್ದೇವೆ. ಆದರೆ, ಭಾರತದ ಇತಿಹಾಸವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು. 

ಜುಲೈ ತಿಂಗಳಲ್ಲಿ ಶಿಮ್ಲಾದಲ್ಲಿ ಮುಂದಿನ ಸಭೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು. ಜುಲೈ 12ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ. 

ಸಾಮಾನ್ಯ ಕಾರ್ಯಸೂಚಿ ಸಿದ್ಧಪಡಿಸಲು ನಿರ್ಧರಿಸಿದ್ದು, ಮುಂದಿನ ಸಭೆಯಲ್ಲಿ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ನಾವು ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕಿದೆ ಮತ್ತು ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಹೊಂದಿಕೊಳ್ಳುವ ಗುಣ ಅಳವಡಿಸಿಕೊಂಡು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸಿದ್ಧಾಂತವನ್ನು ರಕ್ಷಿಸಲು ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಸರ್ವಾಧಿಕಾರಿ ಬಿಜೆಪಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ಇರುವುದಿಲ್ಲ. ಬಿಜೆಪಿಯನ್ನು ಎದುರಿಸಲು ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ. ನಮ್ಮನ್ನು ಪ್ರತಿಪಕ್ಷಗಳು ಎಂದು ಕರೆಯಬೇಡಿ. ನಾವು ದೇಶಭಕ್ತರು ಮತ್ತು ನಾವು 'ಭಾರತ ಮಾತಾ'ವನ್ನು ಪ್ರೀತಿಸುತ್ತೇವೆ’ ಎಂದು ಹೇಳಿದರು. 

ಜೆ.ಪಿ ಚಳವಳಿಯಂತೆಯೇ ನಮ್ಮ ಐಕ್ಯರಂಗವು ಸಾರ್ವಜನಿಕರ ಆಶೀರ್ವಾದವನ್ನು ಪಡೆಯುತ್ತದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದರು. 

‘ದೇಶವನ್ನು ಉಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂಬ ಸಂದೇಶವು ಈ ಸಭೆಯಲ್ಲಿ ಸಿಕ್ಕಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು. 

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ‘ಇಂದಿನ ಆರಂಭವು ದೇಶಕ್ಕೆ ಒಂದು ಮೈಲಿಗಲ್ಲು ಆಗಲಿದ್ದು, ಎಲ್ಲ ನಾಯಕರು ಸಕಾರಾತ್ಮಕ ಚಿಂತನೆಯೊಂದಿಗೆ ಒಟ್ಟಾಗಿ ಸಾಗಲಿದ್ದಾರೆ’ ಎಂದು ಹೇಳಿಕೊಂಡರು. 

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ‘ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ’ ಎಂದರು. 

‘ದೇಶವು ಸಮಸ್ಯೆ ಎದುರಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ಶ್ರೀಗಂಧ ಹಂಚುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಅವರು, ‘ನಾನೀಗ ಫಿಟ್ ಆಗಿದ್ದೇನೆ. ಅವರನ್ನು ಎದುರಿಸಬಲ್ಲೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.