ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸಂಸದರು
ನವದೆಹಲಿ: ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿರುವುದನ್ನು ಖಂಡಿಸಿ ವಿರೋಧ ಪಕ್ಷಗಳ ಸಂಸದರು ಇಂದು (ಶುಕ್ರವಾರ) ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಸಮಸ್ಯೆಗೆ ಕೇಂದ್ರ ಸರ್ಕಾರವು ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡಿನ ಡಿಎಂಕೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಂಸದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ‘ತಮಿಳು ಮೀನುಗಾರರನ್ನು ಮರಳಿ ತನ್ನಿ’, ‘ಮೀನುಗಾರರಿಗೆ ನ್ಯಾಯ ಕೊಡಿಸಿ’ ಮತ್ತು ‘ತಮಿಳುನಾಡು ಮೀನುಗಾರರು ಭಾರತೀಯರು’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸಂಸದರು ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡು ಮೀನುಗಾರರ ಬಂಧನವು ರಾಷ್ಟ್ರೀಯ ವಿಷಯವಾಗಿದ್ದು, ಶ್ರೀಲಂಕಾ ಭಾರತೀಯರ ಮೇಲೆ ದೌರ್ಜನ್ಯ ಎಸಗುತ್ತಿದೆ. ಮೀನುಗಾರರನ್ನು ವರ್ಷಗಳಿಂದ ಹಿಂಸಿಸಲಾಗುತ್ತಿದೆ, ಕಿರುಕುಳ ನೀಡಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ. ಆದರೆ, ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಮೀನುಗಾರರು ಸಮುದ್ರಕ್ಕೆ ಇಳಿಯಲು ಹೆದರುತ್ತಿದ್ದು, ಇದರಿಂದ ಅವರ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ಹೇಳಿದ್ದಾರೆ.
2024ರಲ್ಲಿ, ಶ್ರೀಲಂಕಾ ನೌಕಾಪಡೆಯು ಅಕ್ರಮ ಮೀನುಗಾರಿಕೆ ಆರೋಪದ ಮೇಲೆ 550ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.