
ನವದೆಹಲಿ: 'ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾರ್ವಜನಿಕರ ಹಣ ಬಳಸಿಕೊಂಡು ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲರು ಅದಕ್ಕೆ ಅನುಮತಿಸಲಿಲ್ಲ’ ಎಂಬ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಹೇಳಿಕೆಗೆ ಲೋಕಸಭೆಯ ವಿವಿಧ ವಿರೋಧಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ವಡೋದರಾ ಸಮೀಪದ ಸಾಧ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ‘ಏಕತಾ ಮೆರವಣಿ’ಗೆಯ ಸಭೆಯಲ್ಲಿ ರಾಜನಾಥ ಸಿಂಗ್ ಈ ಮಾತುಗಳನ್ನಾಡಿದ್ದರು.
ರಾಜನಾಥ ಹೇಳಿಕೆಗೆ ಕಾಂಗ್ರೆಸ್, ಟಿಎಂಸಿ, ಎಸ್‌ಪಿ ಸೇರಿದಂತೆ ಲೋಕಸಭೆಯ ವಿವಿಧ ವಿರೋಧ ಪಕ್ಷಗಳ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಚಿವರು ಕ್ಷಮೆಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಸ್ತುತ ಚರ್ಚಿಸಬೇಕಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಹೇಳಿಕೆಗಳನ್ನು ನೀಡಲಾಗುತ್ತಿದೆ’ ಎಂದು ದೂರಿದ್ದಾರೆ.
‘ಪ್ರತಿದಿನ ಇಂಥ ಹೇಳಿಕೆಗಳನ್ನು ನೀಡುತ್ತಾ ಹೊಸ ಗೊಂದಲಗಳನ್ನು ಸೃಷ್ಟಿಸುತ್ತಿದ್ದರೆ, ನಮಗೆ ಜನರ ನೈಜ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಗಮನ ಬೇರೆಡೆ ಸೆಳೆಯುವ ಇಂಥ ಹೇಳಿಕೆಗಳನ್ನು ನೀಡಲಾಗುತ್ತದೆ’ ಎಂದು ಟೀಕಿಸಿದ್ದಾರೆ.
‘ರಕ್ಷಣಾ ಸಚಿವರು ತಮ್ಮ ಭಾಷಣಕ್ಕೆ ಅನುಕೂಲವಾಗುವಂತೆ ಇತಿಹಾಸವನ್ನು ತಿರುಚುವ ಬದಲು, ಕಾರ್ಯತಂತ್ರದ ಸವಾಲುಗಳತ್ತ ಗಮನಹರಿಸಲಿ’ ಎಂದು ಚಂಡೀಗಢದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಸಲಹೆ ನೀಡಿದ್ದಾರೆ.
‘ರಾಜನಾಥ ಸಿಂಗ್ ಅವರು ಏಕೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ನಮಗೆ ಗೊತ್ತಿರುವುದು ಇತಿಹಾಸದ ದಾಖಲೆಗಳು ಮಾತ್ರ. ನೆಹರೂ ಕುರಿತು ಮಾತನಾಡುವಾಗ, ಅವರ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಗಳಿರಬೇಕು’ ಎಂದು ಸಹಾರನ್‌ಪುರ ಕ್ಷೇತ್ರದ ಸಂಸದ ಇಮ್ರಾನ್ ಮಸೂದ್ ಸುದ್ದಿಗಾರರಿಗೆ ತಿಳಿಸಿದರು.
ಸಮಾಜವಾದಿ ಪಕ್ಷದ ಬದಾಯೂಂ ಕ್ಷೇತ್ರದ ಸಂಸದ ಧರ್ಮೇಂದ್ರ ಯಾದವ್, ‘ರಾಜನಾಥ ಸಿಂಗ್ ಅವರು ಅನುಭವಿ ರಾಜಕಾರಣಿ. ರಕ್ಷಣಾ ಸಚಿವರಾಗಿರುವ ಅವರಿಗೆ ಇಂಥ ಇತಿಹಾಸದ ವಿಚಾರಗಳ ಬಗ್ಗೆ ಅರಿವಿಲ್ಲ ಅನ್ನಿಸುತ್ತದೆ. ಅವರು ಇಂಥವನ್ನು ಬಿಟ್ಟು, ದೇಶದ ರಕ್ಷಣಾ ವಿಚಾರಗಳತ್ತ ಗಮನಹರಿಸಲಿ’ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಕೀರ್ತಿ ಆಜಾದ್, ‘ಅಂತಹ ಹಿರಿಯ ನಾಯಕರಾಗಿರುವ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜನಾಥ ಸಿಂಗ್ ಅವರಿಗೆ ಈ ಮಾತುಗಳು ಸರಿ ಹೊಂದುವುದಿಲ್ಲ. ಅವರು ಮಾತಿಗೆ ಪುರಾವೆಗಳನ್ನು ಒದಗಿಸಬೇಕು ಅಥವಾ ಕ್ಷಮೆಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು. ಇದು ನಾಚಿಕೆಗೇಡಿನ ಸಂಗತಿ’ ಎಂದು ಆಜಾದ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.