
ನವದೆಹಲಿ: ಲೋಕಸಭೆಯಲ್ಲಿ ನಡೆದ ಘಟನೆಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ರಾಜ್ಯಸಭೆಯಲ್ಲಿ ಸೋಮವಾರ ಆಗ್ರಹಿಸಿದ ವಿರೋಧ ಪಕ್ಷಗಳ ಸದಸ್ಯರು, ಅವಕಾಶ ದೊರೆಯದ ಕಾರಣ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ಸಿಗದ ಕುರಿತು ಮತ್ತು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಬಳಿ ಮಹಿಳಾ ಸಂಸದರು ಮುತ್ತಿಗೆ ಹಾಕಲು ಮುಂದಾದ ಘಟನೆ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಪಟ್ಟು ಹಿಡಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನೋತ್ತರ ಅವಧಿ ಆರಂಭವಾದ ತಕ್ಷಣ (ಮಧ್ಯಾಹ್ನ 12 ಗಂಟೆಗೆ) ಈ ವಿಷಯ ಪ್ರಸ್ತಾಪಿಸಿದರು. ಆದರೆ ರಾಜ್ಯಸಭೆ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ‘ಇನ್ನೊಂದು ಸದನದಲ್ಲಿ ನಡೆದ ಯಾವುದೇ ವಿಷಯದ ಬಗ್ಗೆ ಇಲ್ಲಿ ಮಾತನಾಡಬಾರದು’ ಎಂದು ಸಭಾಪತಿ ಸೂಚಿಸಿದರು.
ಆಗ ಪ್ರತಿಕ್ರಿಯಿಸಿದ ಖರ್ಗೆ ಅವರು, ‘ನಾನು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ. ಸಂಸತ್ತು ರಾಜ್ಯಸಭೆ ಮತ್ತು ಲೋಕಸಭೆ ಎರಡನ್ನೂ ಒಳಗೊಂಡಿದೆ. ಸಂವಿಧಾನ ಈ ಎರಡೂ ಸದನಗಳನ್ನು ಗುರುತಿಸಿದೆ. ನಾವು ಅದರ ಕಾರ್ಯವಿಧಾನ ಮತ್ತು ನಿಯಮಗಳ ಪ್ರಕಾರವೇ ನಡೆಯಬೇಕು’ ಎಂದರು. ಅದರ ಬೆನ್ನಲ್ಲೇ ಅವರು ಲೋಕಸಭೆಯ ವಿಷಯಗಳ ಕುರಿತು ಮಾತನಾಡಲು ಮುಂದಾದರು.
ಆಗ ಮಧ್ಯಪ್ರವೇಶಿಸಿದ ಸಭಾಪತಿ ಅವರು, ‘ನೀವು ಹೇಳುವುದು ಯಾವುದೂ ಕಡತದಲ್ಲಿ ದಾಖಲಾಗುವುದಿಲ್ಲ’ ಎಂದು, ಪ್ರಶ್ನೋತ್ತರ ಅವಧಿ ಮುಂದುವರಿಸಲು ಸೂಚಿಸಿದರು. ಆಗ ಖರ್ಗೆ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ತಮ್ಮ ಸ್ಥಾನದಲ್ಲಿಯೇ ನಿಂತು ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಅಲ್ಲದೆ, ಆಡಳಿತಾರೂಢ ಬಿಜೆಪಿಯು ವಿರೋಧ ಪಕ್ಷಗಳ ಮಹಿಳಾ ಸಂಸದರನ್ನು ಅವಮಾನಿಸಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು. ನಂತರ, ಪ್ರಶ್ನೋತ್ತರ ಅವಧಿ ಮುಂದುವರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.