ADVERTISEMENT

ಗುಂಪು ದಾಳಿ ತಡೆಗೆ ಕೇಂದ್ರ ವಿಫಲ: ಲೋಕಸಭೆಯಲ್ಲಿ ವಿಪಕ್ಷ ಸಭಾತ್ಯಾಗ

ಪಿಟಿಐ
Published 19 ಜುಲೈ 2018, 19:30 IST
Last Updated 19 ಜುಲೈ 2018, 19:30 IST
ಕೃಷಿ ಉತ್ಪನ್ನಗಳ ಸೂಕ್ತ ಬೆಂಬಲ ಬೆಲೆಗೆ ಒತ್ತಾಯಿಸಿ ಕಾಂಗ್ರೆಸ್‌ ಸಂಸದರು ಸಂಸತ್‌ ಭವನದ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. –ಪಿಟಿಐ ಚಿತ್ರ
ಕೃಷಿ ಉತ್ಪನ್ನಗಳ ಸೂಕ್ತ ಬೆಂಬಲ ಬೆಲೆಗೆ ಒತ್ತಾಯಿಸಿ ಕಾಂಗ್ರೆಸ್‌ ಸಂಸದರು ಸಂಸತ್‌ ಭವನದ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. –ಪಿಟಿಐ ಚಿತ್ರ   

ನವದೆಹಲಿ:ದೇಶದ ವಿವಿಧೆಡೆ ನಡೆಯುತ್ತಿರುವ ಗುಂಪು ದಾಳಿಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ವದಂತಿಗಳು ಮತ್ತು ಸುಳ್ಳು ಸುದ್ದಿ ಹರಿದಾಡುವುದಕ್ಕೆ ತಡೆ ಒಡ್ಡುವಂತೆ ಸಾಮಾಜಿಕ ಜಾಲತಾಣ ಸೇವಾದಾತ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೀಡಿದ ಹೇಳಿಕೆ ಕಾಂಗ್ರೆಸ್‌ ಮತ್ತು ಸಿಪಿಎಂ ಸಂಸದರಿಗೆ ಸಮಾಧಾನ ತರಲಿಲ್ಲ.

ಗುಂಪು ದಾಳಿ ತಡೆಯುವುದಕ್ಕೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದ ಎರಡನೆ ದಿನವೇ ಈ ವಿಚಾರದ ಲೋಕಸಭೆಯಲ್ಲಿ ಚರ್ಚೆಗೆ ಬಂತು.

ADVERTISEMENT

ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾವಿಸಿದರು. ಗುಂಪು ದಾಳಿ ಪ್ರಕರಣಗಳನ್ನು ತಡೆಯಲು ಕೇಂದ್ರ ವಿಫಲವಾಗಿದೆ. ಆದರೆ, ಮದರ್‌ ತೆರೆಸಾ ಅವರು ಸ್ಥಾಪಿಸಿದ ಮಿಷನರೀಸ್‌ ಆಫ್‌ ಚಾರಿಟಿಯ ಅಧೀನದಲ್ಲಿರುವ ಅನಾಥಾಲಯಗಳ ವಿರುದ್ಧಮಕ್ಕಳ ಕಳ್ಳ ಸಾಗಣೆ ಆರೋಪದಲ್ಲಿ ತನಿಖೆ ಆರಂಭಿಸಲಾಗಿದೆ. ದೇಶದಾದ್ಯಂತ ಇರುವ ಈ ಸಂಸ್ಥೆಯ ಅನಾಥಾಲಯಗಳನ್ನು ನಡೆಸುತ್ತಿರುವವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆ‍ಪಾದಿಸಿದರು.

ತಮಗಿಂತ ಭಿನ್ನ ನಿಲುವು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಕೂಡ ಜನರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಹಲ್ಲೆ ನಡೆಸುವುದೇ ಸಹಜ ಸ್ಥಿತಿ ಎಂಬಂತಾಗಿದೆ. ಸರ್ಕಾರ ಈ ಬಗ್ಗೆ ಮಾತನ್ನೇ ಆಡಿಲ್ಲ ಎಂದು ವೇಣುಗೋಪಾಲ್‌ ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಹಲವು ಜನರು ಜೀವ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳು ಹಿಂದೆಯೂ ನಡೆದಿವೆ. ಇವನ್ನು ತಡೆಯುವುದು ರಾಜ್ಯ ಸರ್ಕಾರಗಳ ಹೊಣೆಯಾದರೂ ಕೇಂದ್ರ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದುರಾಜನಾಥ್‌ ಪ್ರತಿಕ್ರಿಯೆ ನೀಡಿದರು.

ಗುಂಪು ದಾಳಿ ತಡೆಯುವಂತೆ 2016ರಲ್ಲಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿತ್ತು. ತಿಂಗಳ ಹಿಂದೆ ಮತ್ತೊಮ್ಮೆ ಇದೇ ರೀತಿಯ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳು ಅಥವಾ ಸುಳ್ಳು ಸುದ್ದಿಗಳು ಹರಿದಾಡಿದ ಬಳಿಕ ಇಂತಹ ಘಟನೆಗಳು ನಡೆದಿವೆ. ಹಾಗಾಗಿ, ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಯುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಾರ್ಖಂಡ್‌ನ ಕಲ್ಲಿದ್ದಲು ವ್ಯಾಪಾರಿಯ ಮೇಲೆ ಗುಂಪು ದಾಳಿ ನಡೆಸಿದ ಎಂಟು ತಪ್ಪಿತಸ್ಥರಿಗೆ ಕೇಂದ್ರ ಸಚಿವ ಜಯಂತ್‌ ಸಿನ್ಹಾ ಅವರು ಹೂಮಾಲೆ ಹಾಕಿ ಅಭಿನಂದಿಸಿದ್ದನ್ನುಕಾಂಗ್ರೆಸ್‌ ಮತ್ತು ಸಿಪಿಎಂ ಸದಸ್ಯರು, ರಾಜನಾಥ್‌ ಅವರ ಮಾತಿನ ಮಧ್ಯದಲ್ಲಿಯೇ ಪ್ರಸ್ತಾಪಿಸಿದರು.

ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರ ಹೇಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
***
ವಾಟ್ಸ್‌ಆ್ಯಪ್ ಮೂಲಕ ಡಿಜಿಟಲ್‌ ಶಿಕ್ಷಣ
ಗುಂಪು ಹಲ್ಲೆಗೆ ಪ್ರಚೋದಿಸುತ್ತಿರುವ ಸುಳ್ಳು ಸುದ್ದಿಗಳು ಹರಡದಂತೆ ತಡೆಯುವ ನಿಟ್ಟಿನಲ್ಲಿ ಬಳಕೆದಾರರಲ್ಲಿ ಅರಿವು ಮೂಡಿಸುವ ಡಿಜಿಟಲ್ ಶಿಕ್ಷಣ ಕಾರ್ಯಕ್ರಮವನ್ನು ವಾಟ್ಸ್‌ಆ್ಯಪ್ ರೂಪಿಸುತ್ತಿದೆ.

ಸೆಂಟರ್ ಫಾರ್ ಸೋಷಿಯಲ್ ರಿಸರ್ಚ್ ಸೇರಿದಂತೆ ಭಾರತದ ಏಳು ಸಂಸ್ಥೆಗಳ ಜೊತೆ ವಾಟ್ಸ್‌ಆ್ಯಪ್ ಸಹಯೋಗವಿದೆ. ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ ಎಂದು ಈ ಸಂಸ್ಥೆಗಳ ಜೊತೆ ಸೇರಿ ಚರ್ಚಿಸುತ್ತಿದೆ. ತಪ್ಪು ಮಾಹಿತಿಗಳು ಮತ್ತು ಸುಳ್ಳುಸುದ್ದಿಗಳು ಒಡ್ಡಿರುವ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯಗಳನ್ನು ರೂಪಿಸಲಾಗುತ್ತಿದೆ.

ಈಗಾಗಲೇ ಕೆಲವು ಸುರಕ್ಷತಾ ಕ್ರಮಗಳನ್ನು ಸಂಸ್ಥೆ ತೆಗೆದುಕೊಂಡಿದೆ. ಫಾರ್ವರ್ಡ್ ಆಗುವ ಎಲ್ಲ ಮೆಸೇಜ್, ಚಿತ್ರಗಳ ಮೇಲೂ ಫಾರ್ವರ್ಡೆಡ್ ಎಂಬ ಬರಹ ಕಂಡುಬರಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.