ADVERTISEMENT

ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ಬಜೆಟ್‌ ಅಧಿವೇಶನದಲ್ಲಿ ನೂತನ ಕೃಷಿ ಕಾಯ್ದೆ ಮೇಲೆ ಚರ್ಚೆ

ಪಿಟಿಐ
Published 4 ಫೆಬ್ರುವರಿ 2021, 8:45 IST
Last Updated 4 ಫೆಬ್ರುವರಿ 2021, 8:45 IST
ಮನೋಜಕುಮಾರ್‌ ಝಾ
ಮನೋಜಕುಮಾರ್‌ ಝಾ   

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸುವ ಏಕ ಪ್ರಕಾರದ ಪ್ರಲಾಪವನ್ನು ನಿಲ್ಲಿಸಬೇಕು ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.

ಬಜೆಟ್‌ ಅಧಿವೇಶನದ ಎರಡನೇ ದಿನವಾದ ಗುರುವಾರ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷಗಳ ಸಂಸದರು, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ನಿರ್ವಹಿಸಿದ ರೀತಿಯನ್ನು ಕಟುವಾಗಿ ಟೀಕಿಸಿದರು.

ಆರ್‌ಜೆಡಿ ಸಂಸದ ಮನೋಜಕುಮಾರ್ ಝಾ, ‘ಸರ್ಕಾರ ತನ್ನ ವಿರುದ್ಧ ವ್ಯಕ್ತವಾಗುವ ಟೀಕೆಗಳನ್ನು ಕೇಳಿಸಿಕೊಳ್ಳುವ ಸಹನೆಯನ್ನು ಕಳೆದುಕೊಂಡಿದೆ.ಸರ್ಕಾರದ ವಿರುದ್ಧ ಟೀಕೆ ಮಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ನಿಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ರೈತರ ನೋವನ್ನು ಅರ್ಥ ಮಾಡಿಕೊಳ್ಳಿ. ಮೈ ಕೊರೆಯುವ ಚಳಿಯಲ್ಲೂ ಅವರು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ನೀರು ಪೂರೈಕೆ ನಿಲ್ಲಿಸಲಾಗಿದೆ. ಶೌಚಾಲಯ ಸೌಲಭ್ಯ ಇಲ್ಲ. ಈಗ ನೋಡಿದರೆ ಮೊಳೆಗಳನ್ನು ನೆಟ್ಟು, ಮುಳ್ಳುಬೇಲಿ ಹಾಕಲಾಗಿದೆ’ ಎಂದು ಝಾ ಹೇಳಿದರು.

‘ದೇಶದೊಳಗೆ ನುಸುಳುವ ನೆರೆ ರಾಷ್ಟ್ರಗಳ ಪ್ರಜೆಗಳನ್ನೂ ಈ ರೀತಿ ಕಠಿಣವಾಗಿ ನಡೆಸಿಕೊಳ್ಳುವುದಿಲ್ಲ’ ಎಂದೂ ಹೇಳಿದರು.

ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಪಾಪ್‌ ಗಾಯಕಿ ರಿಹಾನಾ ಮಾಡಿರುವ ಟ್ವೀಟ್‌ ಪ್ರಸ್ತಾಪಿಸಿದ ಝಾ, ‘ಇಂಥ ಟ್ವೀಟ್‌ಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುವುದಿಲ್ಲ. ಸರ್ಕಾರ ತಳೆಯುವ ಧೋರಣೆಯಿಂದ ದುರ್ಬಲಗೊಳ್ಳುತ್ತದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.