
ನವದೆಹಲಿ: ಸಂಘಟಿತ ಅಪರಾಧ ಜಾಲಗಳ ದತ್ತಾಂಶ (ಡೇಟಾಬೇಸ್) ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಚಾಲನೆ ನೀಡಿದರು.
ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಯು ಎನ್‌ಐಎಯ ಕಳೆದುಹೋದ, ಲೂಟಿಯಾದ ಮತ್ತು ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳ ಮಾಹಿತಿಯನ್ನು ಒಳಗೊಂಡಿರಲಿದೆ. ದೇಶದಾದ್ಯಂತ ತನಿಖಾ ಸಂಸ್ಥೆಗಳು ಬಳಕೆಗೆ ಈ ಎರಡು ಡೇಟಾಬೇಸ್‌ಗಳನ್ನು ರಚಿಸಲಾಗಿದೆ.
ಎನ್‌ಐಎ ಆಯೋಜಿಸಿದ್ದ ಭಯೋತ್ಪಾದನೆ ವಿರೋಧಿ ಸಮಾವೇಶ–2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಎನ್‌ಐಎಯ ಪರಿಷ್ಕೃತ ಅಪರಾಧ ಕೈಪಿಡಿಯನ್ನೂ ಅನಾವರಣ ಮಾಡಿದರು.
‘ಮುಂದಿನ ದಿನಗಳಲ್ಲಿ ಸಂಘಟಿತ ಅಪರಾಧಗಳ ಮೇಲೆ 360 ಡಿಗ್ರಿಯಲ್ಲಿ ಕಣ್ಗಾವಲಿಡಲಾಗುತ್ತದೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ದತ್ತಾಂಶ ವ್ಯವಸ್ಥೆಯನ್ನು ರಚಿಸಲಾಗಿದೆ’ ಎಂದು ಅವರು ಹೇಳಿದರು.
‘ಸಂಘಟಿತ ಅಪರಾಧ ಜಾಲವು ಮೊದಲಿಗೆ ಸುಲಿಗೆ ಉದ್ದೇಶದಿಂದ ಕೃತ್ಯ ಎಸಗುತ್ತದೆ. ಅವರ ನಾಯಕರು ವಿದೇಶಕ್ಕೆ ಪರಾರಿಯಾಗಿ ಅಲ್ಲಿ ನೆಲಸಿದ ನಂತರ ಜಾಲವು ಸುಲಭವಾಗಿ ಭಯೋತ್ಪಾದಕ ಸಂಘಟನೆಗಳ ಸಂಪರ್ಕಕ್ಕೆ ಬರುತ್ತದೆ. ನಂತರ ದೇಶದೊಳಗೇ ಭಯೋತ್ಪಾದನೆ ಕೃತ್ಯ ಎಸಗುತ್ತದೆ’ ಎಂದು ವಿವರಿಸಿದರು.
ಪ್ರತಿ ರಾಜ್ಯವೂ ಎನ್‌ಐಎ, ಸಿಬಿಐ ಮಾರ್ಗದರ್ಶನದೊಂದಿಗೆ ಈ ದತ್ತಾಂಶ ವ್ಯವಸ್ಥೆಯನ್ನು ಬಳಸಿಕೊಂಡು, ತಮ್ಮ ವ್ಯಾಪ್ತಿಯ ಅಪರಾಧವನ್ನು ತಗ್ಗಿಸಬೇಕು ಎಂದು ಹೇಳಿದರು.
ಎರಡು ದಿನಗಳ ಸಮಾವೇಶದಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.