ನವದೆಹಲಿ: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ಕೈಗೊಂಡಿರುವ ರೈತರ ಹೋರಾಟ ಇದೀಗ 10 ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ರೈತರ ಬೇಡಿಕೆಯನ್ನು ಬೆಂಬಲಿಸುವಂತೆ ಎಲ್ಲ ಭಾರತೀಯರಿಗೆ ಕರೆ ನೀಡಿದ್ದಾರೆ.
2006 ರಲ್ಲಿ ಎಪಿಎಂಸಿಗಳು ಅಥವಾ ಸರ್ಕಾರಿ ಮಂಡಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಿದಾಗ ಬಿಹಾರದ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ ಎನ್ನುವ ವರದಿಗಳ ಆಯ್ದ ಭಾಗಗಳ ವಿಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು 'ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರ ದಾರಿ ತಪ್ಪಿಸುತ್ತಿದ್ದಾರೆ' ಟೀಕಿಸಿದ್ದಾರೆ.
'ಬಿಹಾರದ ರೈತರು ಎಂಎಸ್‌ಪಿ (ಕನಿಷ್ಟ ಬೆಂಬಲ ಬೆಲೆ) ಮತ್ತು ಎಪಿಎಂಸಿ ಇಲ್ಲದೆ ಈಗಾಗಲೇ ಸಾಕಷ್ಟು ತೊಂದರೆಯಲ್ಲಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಬಾವಿಗೆ ಇಡೀ ದೇಶದ ರೈತರನ್ನು ತಳ್ಳಲು ಮುಂದಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ಪೋಷಿಸುವ ರೈತರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ' ಎಂದು ಟ್ವೀಟ್ ಮಾಡಿದ್ದಾರೆ .
ಎಪಿಎಂಸಿ ವ್ಯವಸ್ಥೆಯನ್ನು ರದ್ದುಪಡಿಸುವ ಕಾನೂನುಗಳು ರೈತರಿಗೆ ಹೇಗೆ ಅನುಕೂಲವಾಗುತ್ತವೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಒಂದೆಡೆಯಿದ್ದರೆ, ಎನ್‌ಡಿಟಿವಿ ಬಿಡುಗಡೆ ಮಾಡಿರುವ ವರದಿಯಲ್ಲಿ, ಬಿಹಾರದಲ್ಲಿ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ ಇಲ್ಲದೆ ರೈತರ ಬೆಳೆಗಳು ಕೊಳೆಯುತ್ತಿವೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನುವ ಅಂಶವನ್ನು ವಿಡಿಯೋದಲ್ಲಿ ಹೇಳಲಾಗಿದೆ.
ಎಪಿಎಂಸಿ ಕಾಯ್ದೆಯಿಂದಾಗಿ ಸಮಸ್ಯೆಗಳು ಸೃಷ್ಟಿಯಾಗಿದ್ದವು ಮತ್ತು ಅದಕ್ಕಾಗಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ 14 ವರ್ಷಗಳ ಹಿಂದೆಯೇ ಕಾಯ್ದೆಯನ್ನು ರದ್ದುಗೊಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಬಿಹಾರವನ್ನು ಉದಾಹರಣೆಯನ್ನಾಗಿ ಬಳಸಿದ್ದರು.
ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುವುದರಿಂದ ದೇಶಕ್ಕೆ ಹೇಗೆ ಹಾನಿಯಾಗುತ್ತದೆ ಎನ್ನುವ ಕುರಿತು ಪ್ರಧಾನಿ ಮೋದಿ ದೇಶದ ದಾರಿ ತಪ್ಪಿಸುತ್ತಿದ್ದಾರೆ. ಇಡೀ ದೇಶದ ರೈತ ಸಮುದಾಯವು ತೊಂದರೆ ಅನುಭವಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಅವರನ್ನು ಬೆಂಬಲಿಸಿ ಎನ್ನುವ ಸಂದೇಶದೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.