ADVERTISEMENT

ನಾಸಿರುದ್ದೀನ್ ಶಾಗೆ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನವನಿರ್ಮಾಣ ಸೇನೆ

ಗುಂಪು ದಾಳಿಗೆ ಸಂಬಂಧಿಸಿದ ಹೇಳಿಕೆಗೆ ವಿರೋಧ

ಪಿಟಿಐ
Published 22 ಡಿಸೆಂಬರ್ 2018, 12:43 IST
Last Updated 22 ಡಿಸೆಂಬರ್ 2018, 12:43 IST
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ   

ಮೀರತ್‌: ಗುಂಪು ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ನಟ ನಾಸಿರುದ್ದೀನ್‌ ಶಾ ಅವರಿಗೆ ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್‌ ಬುಕ್ ಮಾಡಿದೆ.

ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಮೇಲೆ ನಡೆದ ಗುಂಪು ದಾಳಿ ಬಗ್ಗೆ ಮಾತನಾಡಿದ್ದ ಶಾ, ‘ಪೊಲೀಸ್ ಅಧಿಕಾರಿಯ ಸಾವಿಗಿಂತಲೂ ಹಸುವಿನ ಸಾವಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಮಹತ್ವವಿದೆ’ ಎಂದು ಹೇಳಿದ್ದರು.

‘ಭಾರತದಲ್ಲಿರಲು ನಾಸಿರುದ್ದೀನ್ ಶಾಗೆ ಭಯ ಇದ್ದರೆ, ಪಾಕಿಸ್ತಾನಕ್ಕೆ ಹೋಗಬಹುದು. ಆಗಸ್ಟ್‌ 14ರಂದು ಪಾಕಿಸ್ತಾನ ತೆರಳಲು ಟಿಕೆಟ್ ಬುಕ್ ಮಾಡಿಸಲಾಗಿದೆ. ಅವರಂತೆಯೇ ಬೇರೆ ಯಾರಿಗಾದರೂ ಭಯ ಕಾಡಿದರೆ ಪಾಕಿಸ್ತಾನಕ್ಕೆ ಕಳುಹಿಸಲು ನಮ್ಮ ಸೇನೆ ವಿಮಾನದ ಟಿಕೆಟ್ ಬುಕ್ ಮಾಡಲಿದೆ’ ಎಂದು ಸೇನೆ ಮುಖ್ಯಸ್ಥ ಅಮಿತ್ ಜೈನ್ ಹೇಳಿದರು.

ADVERTISEMENT

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಶಾ, ‘ನನ್ನ ಮಕ್ಕಳನ್ನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ. ಅವರ ಬಗ್ಗೆ ನನಗೆ ಆತಂಕವಿದೆ’ ಎಂದು ‘ಕರ್ವಾನ್-ಎ-ಮೊಹಬ್ಬತ್ ಇಂಡಿಯಾ’ ಸಂಘಟನೆಯ ಯೂಟ್ಯೂಬ್ ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಶಾ, ‘ನಾನು ಪ್ರೀತಿಸುವ ದೇಶ ನನಗೆ ಮನೆ ಇದ್ದಂತೆ. ಅದರ ಬಗ್ಗೆ ನಾನು ಕಾಳಜಿ ವ್ಯಕ್ತಪಡಿಸುವುದು ಅಪರಾಧವೇ? ನನ್ನನ್ನು ಟೀಕಿಸುವವರಂತೆ ನನಗೂ ಟೀಕಿಸುವ ಹಕ್ಕಿದೆ. ಆದರೆ, ಅದಕ್ಕಾಗಿ ದೇಶದ್ರೋಹಿ ಎಂದು ಕರೆಸಿಕೊಳ್ಳಬೇಕೇ? ಇದು ಅತ್ಯಂತ ವಿಚಿತ್ರ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.