ADVERTISEMENT

ದೆಹಲಿಯಲ್ಲಿ 15 ದಿನಗಳಲ್ಲಿ 1,200ಕ್ಕೂ ಅಧಿಕ ಹಕ್ಕಿಗಳ ಸಾವು!

ಪಿಟಿಐ
Published 20 ಜನವರಿ 2021, 12:08 IST
Last Updated 20 ಜನವರಿ 2021, 12:08 IST
ನವದೆಹಲಿಯ ಉದ್ಯಾನದಲ್ಲಿ ಸತ್ತು ಬಿದ್ದಿದ್ದ ಕಾಗೆಗಳು –ಸಂಗ್ರಹ ಚಿತ್ರ 
ನವದೆಹಲಿಯ ಉದ್ಯಾನದಲ್ಲಿ ಸತ್ತು ಬಿದ್ದಿದ್ದ ಕಾಗೆಗಳು –ಸಂಗ್ರಹ ಚಿತ್ರ    

ನವದೆಹಲಿ: ‘ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದಿಂದಾಗಿ 15 ದಿನಗಳಲ್ಲಿ1,200ಕ್ಕೂ ಅಧಿಕ ಪಕ್ಷಿಗಳು ಸತ್ತಿರುವುದು ವರದಿಯಾಗಿದೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ವಿವಿಧ ಪ್ರದೇಶಗಳಲ್ಲಿ ಸತ್ತಿದ್ದ ಹಕ್ಕಿಗಳ ಪೈಕಿ 201 ‍ಪಕ್ಷಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ24 ಪಕ್ಷಿಗಳಿಗೆ ಹಕ್ಕಿ ಜ್ವರ ತಗುಲಿರುವುದು ದೃಢಪಟ್ಟಿದೆ’ ಎಂದು ದೆಹಲಿಯ ಅಭಿವೃದ್ಧಿ ಇಲಾಖೆಯ (ಡಿಡಿಡಿ) ಪಶುಸಂಗೋಪನಾ ಘಟಕದ ನಿರ್ದೇಶಕ ರಾಕೇಶ್‌ ಸಿಂಗ್‌ ಹೇಳಿದ್ದಾರೆ.

‘ಜನವರಿ 6ರಿಂದ ಇದುವರೆಗೂ ದೆಹಲಿಯಲ್ಲಿ ಒಟ್ಟು1,216 ಹಕ್ಕಿಗಳು ಸತ್ತಿರುವುದು ವರದಿಯಾಗಿದೆ. ಇದಕ್ಕೆ ಹಕ್ಕಿ ಜ್ವರಕ್ಕಿಂತಲೂ ಶೀತ ವಾತಾವರಣವೇ ಮುಖ್ಯ ಕಾರಣ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕೆಂಪು ಕೋಟೆ ಸುತ್ತಮುತ್ತ ಒಟ್ಟು15 ಕಾಗೆಗಳು ಸತ್ತಿದ್ದವು. ಈ ಪೈಕಿ ಒಂದು ಕಾಗೆಯ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಸ್ಥಳಿಯಾಡಳಿತವು ಇದೇ26ರವರೆಗೂ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವ ತೀರ್ಮಾನ ಕೈಗೊಂಡಿತ್ತು.

‘ಕೆಲ ದಿನಗಳ ಹಿಂದೆ ದೆಹಲಿಯ ಮೃಗಾಲಯದಲ್ಲಿ ನಾಲ್ಕು ಕೊಕ್ಕರೆಗಳು ಮೃತಪಟ್ಟಿದ್ದವು. ಸೋಮವಾರ 12 ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಸೆಕ್ಯುರಿಟಿ ಅನಿಮಲ್‌ ಡಿಸೀಸಸ್‌ (ನಿಹಸಾದ್‌) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಸಿಂಗ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.