ADVERTISEMENT

ಅಸ್ಸಾಂ: 154 ಗ್ರಾಮ ಜಲಾವೃತ

ಭಾರಿ ಮಳೆ: ಅಪಾಯ ಮಟ್ಟ ಮೀರಿದ ಬ್ರಹ್ಮಪುತ್ರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 15:49 IST
Last Updated 27 ಆಗಸ್ಟ್ 2023, 15:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗುವಾಹಟಿ: ಅಸ್ಸಾಂನಲ್ಲಿ ಭಾನುವಾರ ಮಳೆಯ ಆರ್ಭಟ ಮುಂದುವರಿದಿದೆ. ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ಪ್ರವಾಹದ ಪರಿಸ್ಥಿತಿ ತಲೆದೋರಿದೆ.

ಒಟ್ಟು 11 ಜಿಲ್ಲೆಗಳಲ್ಲಿನ 154 ಗ್ರಾಮಗಳು ಪ್ರವಾಹದಿಂದ ಜಲಾವೃತಗೊಂಡಿವೆ. 45 ಸಾವಿರಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ. 

ನಿಮತಿಘಾಟ್, ಧುಬ್ರಿ ಮತ್ತು ತೇಜ್‌ಪುರ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೇ, ಬೆಕಿ, ದಿಶಾಂಗ್ ಮತ್ತು ಡಿಖೌ ನದಿಗಳೂ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ADVERTISEMENT

ಹೀಗೆಯೇ ಮಳೆ ಮುಂದುವರಿದರೆ ಅಸ್ಸಾಂನ ಹಲವು ಪ್ರದೇಶಗಳ ಪರಿಸ್ಥಿತಿ ಹದಗೆಡುವ ನಿರೀಕ್ಷೆಯಿದೆ. ಜೊತೆಗೆ, ನೆರೆಯ ಅರುಣಾಚಲ ಪ್ರದೇಶ ಹಾಗೂ ಮೇಘಾಲಯ ರಾಜ್ಯದ ಸ್ಥಿತಿಯೂ ಬಿಗಡಾಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ 24 ಗಂಟೆಯಲ್ಲಿ ಸುರಿದ ಮಳೆಯಿಂದ ಆರು ಜಿಲ್ಲೆಗಳಲ್ಲಿ ಮಳೆ ಅನಾಹುತಗಳು ಹೆಚ್ಚಿವೆ. ಧರ್ಮಜಿ ಜಿಲ್ಲೆಯ 48 ಗ್ರಾಮಗಳಲ್ಲಿನ 19,600 ನಾಗರಿಕರು ತೊಂದರೆಗೆ ಸಿಲುಕಿದ್ದಾರೆ. 1,753 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಫಸಲು ಹಾನಿಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.