ADVERTISEMENT

ಲಾಕ್‌ಡೌನ್‌: ದೆಹಲಿಯಿಂದ ತೆರಳಿದ 8 ಲಕ್ಷ ವಲಸೆ ಕಾರ್ಮಿಕರು

ಪಿಟಿಐ
Published 22 ಮೇ 2021, 10:42 IST
Last Updated 22 ಮೇ 2021, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಮೊದಲ ನಾಲ್ಕು ವಾರಗಳಲ್ಲಿ ಸುಮಾರು ಎಂಟು ಲಕ್ಷ ವಲಸೆ ಕಾರ್ಮಿಕರು ರಾಜಧಾನಿಯಿಂದ ತೆರಳಿದ್ದಾರೆ ಎಂದು ದೆಹಲಿ ಸಾರಿಗೆ ಇಲಾಖೆ ವರದಿ ತಿಳಿಸಿದೆ.

ಏಪ್ರಿಲ್‌ 19ರಿಂದ ಮೇ 14ರವರೆಗೆ ಒಟ್ಟು 8.07 ಲಕ್ಷ ವಲಸೆ ಕಾರ್ಮಿಕರು ದೆಹಲಿ ತೊರೆದು ತಮ್ಮ ತವರು ರಾಜ್ಯಗಳಿಗೆ ತೆರಳಿದ್ದಾರೆ. ಇವರಲ್ಲಿನ 3.79 ಲಕ್ಷ ಮಂದಿ ಲಾಕ್‌ಡೌನ್‌ ಜಾರಿಯಾದ ಮೊದಲ ವಾರದಲ್ಲೇ ತೆರಳಿದ್ದಾರೆ. ಕ್ರಮೇಣ ಈ ಸಂಖ್ಯೆ ಕಡಿಮೆಯಾಯಿತು. ಎರಡನೇ ವಾರದಲ್ಲಿ 2.12 ಲಕ್ಷ ಮತ್ತು ಮೂರನೇ ವಾರದಲ್ಲಿ 1.22 ಲಕ್ಷ ಹಾಗೂ ನಾಲ್ಕನೇ ವಾರದಲ್ಲಿ 92,490 ಮಂದಿ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಸಕಾಲಕ್ಕೆ ನೆರೆಯ ರಾಜ್ಯಗಳ ಸಾರಿಗೆ ಪ್ರಾಧಿಕಾರಗಳ ಜತೆ ಸಮನ್ವಯ ಸಾಧಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಯಿತು. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಜತೆ ದೆಹಲಿ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿತ್ತು. ಇದರಿಂದ ಯಾವುದೇ ತೊಂದರೆ ಇಲ್ಲದೆಯೇ ವಲಸೆ ಕಾರ್ಮಿಕರು ತಮ್ಮ ತವರಿಗೆ ತೆರಳಲು ಅನುಕೂಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ನಾಲ್ಕು ವಾರಗಳ ಲಾಕ್‌ಡೌನ್‌ನಲ್ಲಿ 21,879 ಅಂತರರಾಜ್ಯ ಬಸ್‌ ಟ್ರಿಪ್‌ಗಳನ್ನು ಕೈಗೊಳ್ಳಲಾಗಿತ್ತು. ವಲಸೆ ಕಾರ್ಮಿಕರು ರೈಲುಗಳ ಮೂಲಕವೂ ಸಂಚರಿಸಿದ್ದಾರೆ. ಹಲವು ಮಂದಿ ರೈಲು ಸಂಚಾರಕ್ಕೆ ಆದ್ಯತೆ ನೀಡಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಏಪ್ರಿಲ್‌ 19ರಿಂದ ಲಾಕ್‌ಡೌನ್‌ ಜಾರಿಗೊಳಿಸಿದರು. ನಂತರ ಹಲವು ಬಾರಿ ವಿಸ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.