ADVERTISEMENT

ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ರಾಜ್ಯಪಾಲರು ಮದ್ದಾನೆಯಂತೆ: ಶಿವಸೇನಾ

ಪಿಟಿಐ
Published 23 ಸೆಪ್ಟೆಂಬರ್ 2021, 13:34 IST
Last Updated 23 ಸೆಪ್ಟೆಂಬರ್ 2021, 13:34 IST
ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರ ಸಾಂದರ್ಭಿಕ ಚಿತ್ರ
ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರ ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ರಾಜ್ಯಪಾಲರು ಮದ್ದಾನೆಯಂತೆ ವರ್ತಿಸುತ್ತಿದ್ದಾರೆ ಎಂದು ಶಿವಸೇನಾ ಆರೋಪಿಸಿದೆ.

ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು ಮತ್ತು ರಾಜಕೀಯ ಸಂಸ್ಕೃತಿಯನ್ನು ಮದ್ದಾನೆಯಂತೆ ಕಾಲಲ್ಲಿ ತುಳಿಯುತ್ತಿದ್ದಾರೆ ಎಂದು ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರ ಹೆಸರನ್ನು ಉಲ್ಲೇಖಿಸದೆ ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

'ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಅಲ್ಲಿನ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಬಳಕೆ ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಮದಿಸಿದ ಆನೆಗಳಂತೆ ಆಡುತ್ತಾರೆ. ಅವರ ಮಾವುತರು ನವದೆಹಲಿಯಲ್ಲಿ ಕುಳಿತಿರುತ್ತಾರೆ. ಅಂತಹ ಮದ್ದಾನೆಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು, ಕಾನೂನು, ರಾಜಕೀಯ ಸಂಸ್ಕೃತಿಯನ್ನು ತುಳಿದು ಹಾಕುತ್ತವೆ. ಅಂತಹ ಕೆಲಸಗಳಿಗೆ ಅವರು ಆದ್ಯತೆ ನೀಡುತ್ತಾರೆ' ಎಂದು ಶಿವಸೇನಾ ಕಿಡಿಕಾರಿದೆ.

ADVERTISEMENT

'ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯ ಸರ್ಕಾರಗಳನ್ನು ರಾಜ್ಯಪಾಲರು ಅಧಿಕಾರ ಬಳಸಿಕೊಂಡು ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ರಾಷ್ಟ್ರದ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಇದೊಂದು ರೀತಿ ಬೆಂಕಿ ಜೊತೆಗಿನ ಸರಸ. ಹೀಗೆ ವರ್ತಿಸುತ್ತಿರುವವರು ಒಂದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು, ಇದರಿಂದ ತಮ್ಮ ಕೈಯೇ ಸುಡುತ್ತದೆ' ಎಂದು ಕೋಶ್ಯಾರಿ ಅವರಿಗೆ ಮಹಾ ವಿಕಾಸ ಅಘಾಡಿ ನೇತೃತ್ವ ವಹಿಸಿರುವ ಶಿವಸೇನಾ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದೆ.

ಭಗತ್‌ ಸಿಂಗ್‌ ಕೋಶ್ಯಾರಿ ಅವರು ತಮ್ಮ ಪಾಲಿನ 12 ಎಂಎಲ್‌ಸಿಗಳ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿರುವುದಕ್ಕೆ ಸಂಬಂಧಿಸಿ ಶಿವಸೇನಾ ಹೀಗೆ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.