ADVERTISEMENT

ರಫೇಲ್‌: ಎಜಿ, ಸಿಎಜಿಗೆ ಸಮನ್ಸ್‌ ಅನುಮಾನ

ಖರ್ಗೆ ಪ್ರಸ್ತಾವಕ್ಕೆ ಪಿಎಸಿ ಸದಸ್ಯರ ವಿರೋಧ

ಪಿಟಿಐ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ವಿವಾದಾತ್ಮಕ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಆಟಾರ್ನಿ ಜನರಲ್‌ (ಎಜಿ) ಮತ್ತು ಮಹಾಲೇಖಪಾಲರಿಗೆ (ಸಿಎಜಿ) ಸಮನ್ಸ್‌ ನೀಡಬೇಕು ಎಂಬ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವಕ್ಕೆ ಸಮಿತಿಯ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.

ಸಮಿತಿಯ ಬಹುತೇಕ ಸದಸ್ಯರು ಪ್ರಸ್ತಾವವನ್ನು ವಿರೋಧಿಸಿದ ಕಾರಣ ಸಮನ್ಸ್‌ ನೀಡುವುದು ಅನುಮಾನ ಎಂದು ಹೇಳಲಾಗಿದೆ. ಇದು ಸುಪ್ರೀಂ ಕೋರ್ಟನ್ನೇ ಪ್ರಶ್ನಿಸಿದಂತೆ ಎಂದು ಸದಸ್ಯರು ಆಕ್ಷೇಪ ಎತ್ತಿದ್ದಾರೆ.

ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿಯೇ ಇಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ ಎಂದು ಪಿಎಸಿ ಅಧ್ಯಕ್ಷ ಖರ್ಗೆ ಶನಿವಾರ ಆಕ್ಷೇಪ ಎತ್ತಿದ್ದರು.

ADVERTISEMENT

ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಿದ್ದು ಯಾವಾಗ ಎಂದು ಸ್ಪಷ್ಟನೆ ಕೇಳಲು ಎಜಿ ಮತ್ತು ಸಿಎಜಿಗೆ ಸಮನ್ಸ್‌ ನೀಡುವಂತೆ ಸಮಿತಿ ಸದಸ್ಯರನ್ನು ಕೋರುವುದಾಗಿ ಖರ್ಗೆ ಹೇಳಿದ್ದರು.

ಪಿಎಸಿಯಲ್ಲಿ ಒಟ್ಟು 22 ಸದಸ್ಯರಲ್ಲಿ 14 ಮಂದಿ ಎನ್‌ಡಿಎ ಸಂಸದರು. ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಮೂವರು, ಟಿಎಂಸಿಯ ಇಬ್ಬರು, ಟಿಡಿಪಿ, ಬಿಜೆಡಿ ಮತ್ತು ಎಐಎಡಿಎಂಕೆಯ ತಲಾ ಒಬ್ಬರು ಸಮಿತಿಯಲ್ಲಿದ್ದಾರೆ.

ರಫೇಲ್‌ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್‌ ನೀಡಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಖರ್ಗೆ ಅವರಂಥವರು ರಾಜಕಾರಣ ಮಾಡುತ್ತಿರುವುದು ದುರಾದೃಷ್ಟ ಎಂದು ಪಿಎಸಿ ಸದಸ್ಯ ಮತ್ತು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.