ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ದಾಳಿ ಬಳಿಕ ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು
–ಪಿಟಿಐ ಚಿತ್ರ
ಶ್ರೀನಗರ: ಏ.22ರಂದು ನಡೆದ ಪಹಲ್ಗಾಮ್ ದಾಳಿಗೆ ಭಯೋತ್ಪಾದಕರಿಗೆ ಸರಕು ಸರಬರಾಜು ಮಾಡಿದ್ದು ಕುಲ್ಗಾಮ್‌ನ ಶಾಲಾ ಶಿಕ್ಷಕನೇ ಎಂದು ತನಿಖೆ ವೇಳೆ ದೃಢಪಟ್ಟಿದೆ.
ಭಯೋತ್ಪಾದಕರಿಗೆ ನೆರವು ನೀಡಿದ್ದ ಆರೋಪದ ಮೇಲೆ ಕುಲ್ಗಾಮ್‌ನ ಶಾಲಾ ಶಿಕ್ಷಕ ಮೊಹಮ್ಮದ್ ಯೂಸೂಫ್ ಕಟಾರಿನನ್ನು (26) ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಈತ ಪಾಕಿಸ್ತಾನದ ಲಷ್ಕರ್–ಎ– ತಯಬಾ (ಎಲ್‌ಇಟಿ) ನಿರಂತರ ಸಂಪರ್ಕದಲ್ಲಿದ್ದು, ಭೂಗತನಾಗಿ ಕೆಲಸ ಮಾಡುತ್ತಿದ್ದ. ಪಹಲ್ಗಾಮ್‌ನಲ್ಲಿ ನಡೆದ ದಾಳಿಗೂ ಮುನ್ನ ಭಯೋತ್ಪಾದಕರಿಗೆ ಸರಕು ಸಾಗಾಣಿಕೆಗೂ ನೆರವಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಉಗ್ರರನ್ನು ಮಟ್ಟಹಾಕಲು ಭಾರತೀಯ ಸೇನೆಯು ಮೇ 22ರಿಂದ ‘ಆಪರೇಷನ್ ಮಹದೇವ್’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಜುಲೈ 28ರಂದು ದಾಚಿಗಾಮ್ ಅರಣ್ಯ ಪ್ರದೇಶದಲ್ಲಿ ಲಷ್ಕರ್–ಎ–ತಯಬಾದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. ಮೃತರನ್ನು ಪಹಲ್ಗಾಮ್ ದಾಳಿ ನಡೆಸಿದ್ದ ಸುಲೈಮಾನ್ ಅಲಿಯಾಸ್ ಆಸೀಫ್, ಜಿಬ್ರಾನ್ ಹಾಗೂ ಹಮ್ಜಾ ಅಫ್ಗಾನಿ ಎಂದು ಗುರುತಿಸಲಾಗಿತ್ತು. ಉಗ್ರರು ಅವಿತಿದ್ದ ಝಬರ್ವಾನ್ ಅರಣ್ಯದ ಅಡಗುತಾಣದಿಂದ ಎ.ಕೆ.–47 ಬಂದೂಕು, ಎಂ.9 ರೈಫಲ್ಸ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಅವುಗಳನ್ನು ಚಂಡೀಗಢದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ವೇಳೆ ಅಡಗುತಾಣದಲ್ಲಿ ಪತ್ತೆಯಾದ ಬಂದೂಕಿನಿಂದಲೇ ಪ್ರವಾಸಿಗರನ್ನು ಹತ್ಯೆಗೈದಿರುವುದು ದೃಢಪಟ್ಟಿತ್ತು.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದರು.
ಎನ್‌ಕೌಂಟರ್ ಜಾಗದ ಅವಶೇಷಗಳಲ್ಲಿ ಹಾನಿಯಾಗಿದ್ದ ಆ್ಯಂಡ್ರಾಯ್ಡ್ ಚಾರ್ಜರ್ ಅನ್ನು ಕೂಡ ಸೈನಿಕರು ವಶಕ್ಕೆ ಪಡೆದಿದ್ದರು. ಅದರಲ್ಲಿದ್ದ ನೋಂದಣಿ ಸಂಖ್ಯೆ ಖರೀದಿ ದಿನಾಂಕ ಅಧರಿಸಿ ಮಾಹಿತಿ ಕಲೆಹಾಕಿದ ವೇಳೆ ಶ್ರೀನಗರದಲ್ಲಿಯೇ ಅದನ್ನು ಖರೀದಿಸಿರುವುದು ಕಂಡುಬಂದಿತ್ತು. ಈ ಮಾಹಿತಿ ಬೆನ್ನುಹತ್ತಿ ಹೋದ ಪೊಲೀಸರು ಅದನ್ನು ಖರೀದಿಸಿದ್ದು ಕಟಾರಿ ಎಂಬುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ವೇಳೆ ತಾನೇ ಚಾರ್ಜರ್ ಖರೀದಿಸಿ ಭಯೋತ್ಪಾದಕರಿಗೆ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಪಹಲ್ಗಾಮ್ ದಾಳಿಗೂ ಮುನ್ನ ಝಬರ್ವಾನ್ ಅರಣ್ಯದಲ್ಲಿ ನಾಲ್ಕು ಬಾರಿ ಭೇಟಿಯಾಗಿದ್ದೆನು ಎಂದು ಮಾಹಿತಿ ನೀಡಿದ್ದಾನೆ. ಭಯೋತ್ಪಾದಕರನ್ನು ಭೇಟಿಯಾಗಿದ್ದ ಕಟಾರಿ ಸರಬರಾಜು ಒದಗಿಸುವುದು ಅರಣ್ಯ ಮಾರ್ಗಗಳ ಮಾಹಿತಿ ಹಂಚಿಕೆ ತಾಂತ್ರಿಕ ನೆರವು ಹಾಗೂ ಮೊಬೈಲ್ ಚಾರ್ಜರ್ ಅನ್ನು ನೀಡಿದ್ದ. ಆತ ಎಲ್‌ಇಟಿ ಜಾಲದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರವಾಸಿಗರ ಮೇಲೆ ದಾಳಿಯ ಬಳಿಕ ಕಾಶ್ಮೀರದ ಮಧ್ಯಭಾಗದ ಅರಣ್ಯದಲ್ಲಿ ತಲೆಮರೆಸಿಕೊಳ್ಳಲು ನೆರವಾಗಿದ್ದು ಎಂದು ತನಿಖೆ ವೇಳೆ ಗೊತ್ತಾಗಿದೆ.
ಕಟಾರಿ ಬಂಧನದ ಮೂಲಕ ಉಗ್ರರಿಗೆ ಸರಬರಾಜು ಆಗುತ್ತಿದ್ದ ಪ್ರಮುಖ ಜಾಲ ಪತ್ತೆಯಾಗಿ ಉಗ್ರರ ಚಲನವಲನದ ಮೇಲೂ ನಿಗಾವಹಿಸಲು ನೆರವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಟಾರಿ ಈಗಲೂ ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಮುಂದುವರಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಎಲ್‌ಇಟಿ ಜಾಲದ ವಿಸ್ತರಣೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.