
ನವದೆಹಲಿ: ಪಹಲ್ಗಾಮ್‌ನಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಜಮ್ಮು–ಕಾಶ್ಮೀರ ಸರ್ಕಾರಕ್ಕೆ ಅನುಮತಿಸಿದೆ.
ಪಾಕಿಸ್ತಾನ ಮೂಲದ ಉಗ್ರರು ಕಳೆದ ಏ. 22ರಂದು ಪಹಲ್ಗಾಮ್‌ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಹತರಾಗಿದ್ದರು. ಈ ದುಷ್ಕೃತ್ಯದ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದರಿಂದ, ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಯೋಜನೆಯ ಕುರಿತಂತೆ ತನ್ನ ಅಭಿಪ್ರಾಯ ತಿಳಿಸುವಂತೆ ತನಿಖಾ ಸಂಸ್ಥೆಯನ್ನು ಕೋರಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಕೇಬಲ್ ಕಾರ್ ಯೋಜನೆ ಬಗ್ಗೆ ನಮ್ಮ ಅಭಿಪ್ರಾಯ ಕೇಳಲಾಗಿತ್ತು. ತನಿಖಾ ದೃಷ್ಟಿಕೋನದಿಂದ ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ನಾವು ತಿಳಿಸಿದ್ದೇವೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಪಹಲ್ಗಾಮ್ ಕ್ಷೇತ್ರದ ಶಾಸಕ ಅಲ್ತಾಫ್ ಅಹ್ಮದ್ ವಾನಿ ಅವರ ಪ್ರಶ್ನೆಗೆ ಅ. 27ರಂದು ಉತ್ತರಿಸಿದ್ದ ಸರ್ಕಾರವು, ‘ಯೋಜನೆಯ ಕೆಲಸವನ್ನು ಕಂಪನಿಯೊಂದಕ್ಕೆ ನೀಡಲಾಗಿದೆ. ಆದರೆ ಭಯೋತ್ಪಾದಕ ದಾಳಿಯ ನಂತರದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ಆರಂಭಿಸಿಲ್ಲ’ ಎಂದಿತ್ತು.
‘ಜಮ್ಮು–ಕಾಶ್ಮೀರ ಕೇಬಲ್ ಕಾರ್ ಕಾರ್ಪೊರೇಷನ್ (ಜೆಕೆಸಿಸಿಸಿ) ಕೈಗೆತ್ತಿಕೊಂಡಿರುವ ಕೇಬಲ್ ಕಾರ್ ಯೋಜನೆಯ ಕೆಳಗಿನ ಟರ್ಮಿನಲ್ ಪಾಯಿಂಟ್ ಪಹಲ್ಗಾಮ್‌ನ ಯಾತ್ರಿ ನಿವಾಸದ ಬಳಿ ಇದೆ. ಮೇಲಿನ ಟರ್ಮಿನಲ್ ಪಾಯಿಂಟ್ ಬೈಸರನ್‌ನಲ್ಲಿದೆ. ಯೋಜನೆಯ ಒಟ್ಟು ಉದ್ದ 1.4 ಕಿ.ಮೀ. ಇದ್ದು, ಅನುಷ್ಠಾನಕ್ಕೆ ಅಗತ್ಯವಿರುವ 9.13 ಹೆಕ್ಟೇರ್ ಜಮೀನು ಅರಣ್ಯ ಇಲಾಖೆಗೆ ಸೇರಿದೆ’ ಎಂದು ಪ್ರವಾಸೋದ್ಯಮ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.