ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿರುವ ಹೊತ್ತಿನಲ್ಲಿ, ಸರ್ಕಾರಿ ಅಂದಾಜಿನ ಪ್ರಕಾರ ಅಸ್ಸಾಂ ರೈಫಲ್ಸ್ ಹಾಗೂ ಐದು ಅರೆ ಸೈನಿಕ ಪಡೆಗಳಲ್ಲಿ ಒಟ್ಟು 1.11 ಲಕ್ಷ ಹುದ್ದೆಗಳು ಖಾಲಿ ಇವೆ.
ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಸಿಐಎಸ್ಎಫ್, ಸಿಆರ್‌ಪಿಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗೆ ಮಂಜೂರಾದ ಸಿಬ್ಬಂದಿ 10.59 ಲಕ್ಷ, ಈಗ 9.47 ಲಕ್ಷ ಸಿಬ್ಬಂದಿ ಇದ್ದಾರೆ, ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್‌ಬಿ ಮುಖ್ಯವಾಗಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.
ಈ ದತ್ತಾಂಶವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಇತ್ತೀಚೆಗೆ ನೀಡಿದೆ. ಇದು ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವರದಿಯ ಭಾಗವಾಗಿದೆ. 43,130 ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಸಿಐಎಸ್‌ಎಫ್‌ನಲ್ಲಿ 43,250, ಸಿಆರ್ ಪಿಎಫ್‌ನಲ್ಲಿ 34,860, ಬಿಎಸ್‌ಎಫ್ ನಲ್ಲಿ 14,367, ಅಸ್ಸಾಂ ರೈಫಲ್ಸ್‌ನಲ್ಲಿ 3,769, ಐಟಿಬಿಪಿಯಲ್ಲಿ 10,249 ಮತ್ತು ಎಸ್‌ಎಸ್ ಬಿಯಲ್ಲಿ 5,189 ಖಾಲಿ ಹುದ್ದೆಗಳಿವೆ. ನಿವೃತ್ತಿ, ರಾಜೀನಾಮೆ, ಬಡ್ತಿ, ಸಿಬ್ಬಂದಿಯ ನಿಧನ, ಹೊಸ ಹುದ್ದೆಗಳ ಸೃಷ್ಟಿ ಮತ್ತಿತರ ಕಾರಣಗಳಿಂದ ಈ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿ ನಿರಂತರ ಪ್ರಕ್ರಿಯೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.