ADVERTISEMENT

ಸೇನೆಗೆ ಮಾಹಿತಿ ನೀಡದೆ ಪಾಕ್ ಯುವತಿ ವರಿಸಿದ್ದ CRPF ಯೋಧ ಸೇವೆಯಿಂದ ವಜಾ

ಪಿಟಿಐ
Published 3 ಮೇ 2025, 14:34 IST
Last Updated 3 ಮೇ 2025, 14:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪಾಕಿಸ್ತಾನದ ಯುವತಿಯನ್ನು ಮದುವೆಯಾದ ಮಾಹಿತಿಯನ್ನು ಗೋಪ್ಯವಾಗಿಟ್ಟ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಯೋಧನನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದ್ದು, ಇವರ ನಡೆ ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂದು ರಕ್ಷಣಾ ಇಲಾಖೆ ಹೇಳಿದೆ.

ಮುನೀರ್ ಅಹ್ಮದ್‌ ವಜಾಗೊಂಡ ಸಿಬ್ಬಂದಿ. ಇವರು ಅರೆಸೇನಾ ಪಡೆಯ 41ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಇವರನ್ನು ಕರ್ತವ್ಯದಿಂದ ವಜಾಗೊಳಿಸಿ, ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಕ್ರಮಬದ್ಧವಾದ ವಿಸಾ ಇಲ್ಲ ಎಂಬುದು ಗೊತ್ತಿದ್ದರೂ ಪಾಕಿಸ್ತಾನದ ಪ್ರಜೆಯಾದ ಯುವತಿಯನ್ನು ವಿವಾಹವಾಗಿದ್ದು ಸೇನೆಯ ನಿಯಮಗಳ ಉಲ್ಲಂಘನೆಯಾಗಿದೆ. ಈ ಕಾರಣದಿಂದ ಮುನೀರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ’ ಎಂದು ಸಿಆರ್‌ಪಿಎಫ್‌ ವಕ್ತಾರರೂ ಆದ ಡಿಐಜಿ ದಿನಕರನ್ ಮಾಹಿತಿ ನೀಡಿದ್ದಾರೆ.

ಏ. 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆ ಬಳಿ ಬಂದೂಕುಧಾರಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಇದರಲ್ಲಿ ಕರ್ನಾಟಕದ ಮೂವರು ಮತ್ತು ವಿದೇಶದ ಇಬ್ಬರು ಸೇರಿ ಒಟ್ಟು 26 ಜನ ಮೃತಪಟ್ಟರು. ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧ ತುಂಡಾಗಿದೆ. ಪಾಕಿಸ್ತಾನದ ಪ್ರಜೆಗಳನ್ನು ದೇಶ ತೊರೆಯುವಂತೆ ಭಾರತ ಸರ್ಕಾರ ಆದೇಶಿಸಿತ್ತು. ಇದೇ ಸಂದರ್ಭದಲ್ಲಿ 2024ರ ಮೇ 24ರಂದು ವಿಡಿಯೊ ಕರೆ ಮೂಲಕ ಪಾಕಿಸ್ತಾನದ ಮೆನಲ್ ಖಾನ್ ಎಂಬುವವರನ್ನು ಅಹ್ಮದ್ ವರಿಸಿದ್ದು ಬೆಳಕಿಗೆ ಬಂದಿದೆ. 

ತಾನು ವಿವಾಹವಾಗಿದ್ದು ಮತ್ತು ಯುವತಿ ಭಾರತದಲ್ಲಿ ಅವಧಿ ಮೀರಿ ನೆಲೆಸಿದ್ದನ್ನು ಯೋಧ ಅಹ್ಮದ್ ಗೋಪ್ಯವಾಗಿಟ್ಟಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ವಜಾಗೊಳಿಸಿ, ತನಿಖೆ ನಡೆಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.