ಜಮ್ಮು: ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಜಮ್ಮುವಿನ ವಿಶೇಷ ನ್ಯಾಯಾಲಯ 10 ದಿನಗಳ ಹೆಚ್ಚುವರಿ ಕಸ್ಟಡಿಗೆ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಯಲ್ಲಿದ್ದ ಆರೋಪಿಗಳಾದ ಪರ್ವೈಜ್ ಅಹ್ಮದ್ ಜೋಥರ್ ಬಶೀರ್ ಅಹ್ಮದ್ ಜೋಥರ್ ಅವರನ್ನು ಅವಧಿ ಮುಗಿದ ಹಿನ್ನೆಲೆ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಈ ಸಂದರ್ಭದಲ್ಲಿ ಎನ್‌ಐಎ ಅಧಿಕಾರಿಗಳು ಕಸ್ಟಡಿ ಅವಧಿಯನ್ನು ವಿಸ್ತರಿಸಿ, ಹೆಚ್ಚಿನ ತನಿಖೆಗೆ ಅನುವು ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ದಾಳಿ ನಡೆಸಿದ ಭಯೋತ್ಪಾದಕರ ಗುರುತುಗಳನ್ನು ಬಹಿರಂಗಪಡಿಸಿದ್ದು, ಅವರು ಪಾಕ್ ಮೂಲದ ನಿಷೇಧಿತ ಲಷ್ಕರ್–ಎ–ತಯಬಾಗೆ (ಎಲ್‌ಇಟಿ) ಸೇರಿದವರು ಎಂಬುದನ್ನು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರಿಗೆ ಈ ಆರೋಪಿಗಳು ಆಶ್ರಯ, ಆಹಾರ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಿದ್ದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.