ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಕಾಶ್ಮೀರದಲ್ಲಿ ವ್ಯಾಪಕ ಭದ್ರತೆ ಇದೆಯೇ? ಕಣಿವೆಯಲ್ಲಿ ಈಗ ಸಹಜ ಸ್ಥಿತಿ ಮರುಸ್ಥಾಪನೆಯಾಗಿದೆಯೇ ಎಂಬಂತಹ ಪ್ರಶ್ನೆಗಳು ಉದ್ಭವಿಸಿವೆ.
ಪಹಲ್ಗಾಮ್‌ನಲ್ಲಿ ಭದ್ರತಾ ವೈಫಲ್ಯ ಆಗಿದೆ ಎಂಬುದಾಗಿ ಕೇಂದ್ರ ಸರ್ಕಾರವು ಉಗ್ರರ ದಾಳಿ ಕುರಿತು ಚರ್ಚಿಸಲು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಪ್ಪಿಗೆಕೊಂಡಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕುರಿತು ಆಡಳಿತವು ಯಾವುದೇ ಮುನ್ಸೂಚನೆ/ಸಲಹೆ ನೀಡಿರಲಿಲ್ಲ ಎಂದು ಕಾಶ್ಮೀರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರತರಾದವರು ಹೇಳುತ್ತಿದ್ದಾರೆ.
‘ಬೈಸರನ್ ಕಣಿವೆಯನ್ನು ಏಪ್ರಿಲ್ 20ರಂದು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು. ಏಪ್ರಿಲ್ 22ರಂದು ಉಗ್ರರಿಂದ ದಾಳಿ ನಡೆಯಿತು. ವಾಸ್ತವದಲ್ಲಿ ಜೂನ್‌ನಲ್ಲಿ ಬೈಸರನ್ ಕಣಿವೆಗೆ ಸಂಪರ್ಕ ಸಾಧ್ಯವಾಗುತ್ತದೆ. ಅದರಲ್ಲೂ, ಅಮರನಾಥ ಯಾತ್ರಿಗಳು ಈ ಸ್ಥಳದ ಮೂಲಕವೇ ಸಾಗಬೇಕು. ಹಾಗಾಗಿ, ಈ ವರ್ಷ ಅವಧಿಗೂ ಮುಂಚೆಯೇ ಈ ಜಾಗವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದ್ದು ಏಕೆ’ ಎಂದು ಹೆಸರು ಹೇಳಲು ಇಚ್ಛಿಸದ, ಪಹಲ್ಗಾಮ್‌ನ ಹೋಟೆಲ್ ಮಾಲೀಕರೊಬ್ಬರು ಹೇಳುತ್ತಾರೆ.
ಅಮರನಾಥ ಯಾತ್ರೆ ವೇಳೆ, ಭಯೋತ್ಪಾದಕ ಚಟುವಟಿಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪಹಲ್ಗಾಮ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸೇನೆಯ ಕಣ್ಗಾವಲು ಇರುತ್ತದೆ. ಆದರೆ, ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಬೈಸರನ್‌ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದು ಆಡಳಿತದ ನಿರ್ಲಕ್ಷ್ಯ ಕುರಿತು ಗಂಭೀರ ಪ್ರಶ್ನೆಗಳಿಗೆ ಕಾರಣವಾಗುತ್ತಿದೆ ಎಂದೂ ಅವರು ಹೇಳುತ್ತಾರೆ.
‘ಚೆಕ್‌ಪಾಯಿಂಟ್‌ಗಳಾಗಲಿ, ಗಸ್ತು ವಾಹನಗಳು ಇರಲಿಲ್ಲ. ಪ್ರವಾಸಿಗರು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳುವಂತಹ ಸ್ಥಿತಿ ಇತ್ತು’ ಎಂದು ಹಲವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.