ಜಮ್ಮು: ಪಹಲ್ಗಾಮ್ ದಾಳಿಗೆ ಭದ್ರತಾ ಪಡೆಗಳ ಪ್ರತಿಕ್ರಿಯೆಯು ವಿವೇಚನಾರಹಿತ ಮತ್ತು ದಮನಕಾರಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈ ಕುರಿತಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪತ್ರ ಬರೆದಿರುವ ಅವರು, ಅಮಾಯಕ ಕಾಶ್ಮೀರಿಗಳನ್ನು ಬಂಧಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದಿದ್ದಾರೆ.
‘ಪಹಲ್ಗಾಮ್ ದಾಳಿಗೆ ಇಡೀ ದೇಶವೇ ದುಃಖಿಸುತ್ತಿರುವ ಈ ಸಮಯದಲ್ಲಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಈ ಹೇಯ ಕೃತ್ಯವನ್ನು ದೇಶದಾದ್ಯಂತ ಖಂಡಿಸಲಾಗಿದೆ. ಅದರಲ್ಲಿಯೂ ಕಾಶ್ಮೀರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೀದಿಗಿಳಿಯುವ ಮೂಲಕ ದಾಳಿಯನ್ನು ಖಂಡಿಸಿದ್ದರು’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಇಂತಹ ನಿರ್ಣಾಯಕ ಸಮಯದಲ್ಲಿ ಕಾಶ್ಮೀರಿಗಳು ಭಯೋತ್ಪಾದನೆ ವಿರುದ್ಧ ಸಿಡಿದೇಳುವ ಮೂಲಕ ದೇಶದೊಂದಿಗೆ ಒಗ್ಗಟ್ಟಾಗಿ ನಿಂತಿದ್ದರು. ದಾಳಿಯ ಸಂದರ್ಭದಲ್ಲಿಯೂ ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರ ರಕ್ಷಣೆಗೆ ಧಾವಿಸಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮೂಲಕ, ಅವರಿಗೆ ರಕ್ತ ನೀಡುವ ಮೂಲಕ ಅವರು ದೇಶದ ನಾಗರಿಕರ ಪರ ನಿಂತಿದ್ದರು’ ಎಂದು ತಿಳಿಸಿದ್ದಾರೆ.
ಅದಾಗ್ಯೂ, ಪಹಲ್ಗಾಮ್ ದಾಳಿಗೆ ಭದ್ರತಾ ಪಡೆಗಳ ಪ್ರತಿಕ್ರಿಯೆಯು ವಿವೇಚನಾರಹಿತ ದಮನದಂತೆ ಕಾಣುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘3 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದು ಮತ್ತು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಸುಮಾರು 100 ಪ್ರಕರಣಗಳು ದಾಖಲಾಗಿರುವುದು ನಿಜಕ್ಕೂ ಆಂತಕಕಾರಿಯಾಗಿದೆ. ಇದು ನ್ಯಾಯವನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಶಿಕ್ಷೆಯ ಸಾಮೂಹಿಕ ರೂಪವಾಗಿದೆ. ಈ ವಿಧಾನವು ಕುಟುಂಬಗಳು ಮತ್ತು ಸಮುದಾಯವನ್ನು ದೂರವಿಡುವ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ’ ಎಂದು ಆತಂಕ ಹೊರಹಾಕಿದ್ದಾರೆ.
‘ನಿಸ್ಸಂದೇಹವಾಗಿ ನಾವು(ಕಾಶ್ಮೀರಿಗಳು) ನ್ಯಾಯದ ಪರವಾಗಿ ಇದ್ದರೂ, ಪ್ರಸ್ತುತ ಕೈಗೊಳ್ಳುತ್ತಿರುವ ಕ್ರಮಗಳು ನ್ಯಾಯಯುತವಾಗಿಲ್ಲ. ಭಯೋತ್ಪಾದಕರ ಕೃತ್ಯಗಳಿಗೆ ಅಮಾಯಕ ನಾಗರಿಕರನ್ನು ಬಂಧಿಸುವುದು ಸರಿಯಾದ ಕ್ರಮವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಅಮರನಾಥ ಯಾತ್ರೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಇಂತಹ ಕ್ರಮಗಳಿಗೆ ಕಡಿವಾಣ ಹಾಕಿ, ಅಮಾಯಕರನ್ನು ಬಿಡುಗಡೆಗೊಳಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಕಾಶ್ಮೀರಿಗಳು ಯಾತ್ರಿಕರನ್ನು ಆದರದಿಂದ ಸ್ವಾಗತಿಸಲು ಅವರು ಸಿದ್ಧರಾಗಲಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.