ADVERTISEMENT

ಉಗ್ರರಿಗೆ ಕಲ್ಪನೆಗೂ ಮೀರಿದ ಶಿಕ್ಷೆ: ಪ್ರಧಾನಿ ಮೋದಿ

ಪಹಲ್ಗಾಮ್‌ ದಾಳಿ: ಪ್ರಧಾನಿ ನರೇಂದ್ರ ಮೋದಿ ಶಪಥ

ಪಿಟಿಐ
Published 24 ಏಪ್ರಿಲ್ 2025, 16:02 IST
Last Updated 24 ಏಪ್ರಿಲ್ 2025, 16:02 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ಮಧುಬನಿ/ಪಟ್ನಾ(ಬಿಹಾರ): ‘ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿರುವ ಉಗ್ರರನ್ನು ಹುಡುಕಿ, ಶಿಕ್ಷಿಸಲಾಗುವುದು. ಅವರ ಕಲ್ಪನೆಗೂ ಮೀರಿದಂತಹ ಶಿಕ್ಷೆ ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಪಥ ಮಾಡಿದ್ದಾರೆ.

ADVERTISEMENT

‘ಎಲ್ಲಿಯೇ ಅಡಗಿದ್ದರೂ ಉಗ್ರರನ್ನು ಪತ್ತೆ ಮಾಡಲಾಗುವುದು. ಉಗ್ರರಿಗೆ ಮಾತ್ರವಲ್ಲ ಅವರಿಗೆ ಬೆಂಬಲ ನೀಡುತ್ತಿರುವವರನ್ನೂ ಭಾರತ ದಂಡಿಸಲಿದೆ ಎಂದು ಬಿಹಾರದ ಈ ನೆಲದಿಂದ ಇಡೀ ವಿಶ್ವಕ್ಕೆ ಹೇಳಲು ಬಯಸುತ್ತೇನೆ’ ಎನ್ನುವ ಮೂಲಕ ಪ್ರಧಾನಿ ಕಠಿಣ ಸಂದೇಶ ರವಾನಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದಿದ್ದ ಉಗ್ರರ ದಾಳಿ ನಂತರ ಮೊದಲ ಬಾರಿಗೆ ಇಲ್ಲಿ ನಡೆದ ಪಂಚಾಯತ್‌ರಾಜ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ಮೂಲಕ ಭಾರತದ ಆತ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದರು. ಮೋದಿ ಅವರ ಮಾತಿಗೆ ಅನುಮೋದನೆ ಎಂಬಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಂದ ಭಾರಿ ಕರತಾಡನ ಕೇಳಿಬಂತು. 

ಮೋದಿ ಅವರು ಹಿಂದಿಯಲ್ಲಿಯೇ ಭಾಷಣ ಆರಂಭಿಸಿದರು. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಕುರಿತು ವಿಶ್ವ ಸಮುದಾಯಕ್ಕೆ ಸಂದೇಶ ರವಾನಿಸುವ ಉದ್ದೇಶದಿಂದ, ಕೆಲಹೊತ್ತು ಇಂಗ್ಲಿಷ್‌ನಲ್ಲಿಯೂ
ಮಾತನಾಡಿದರು.

ಸಾವಿಗೀಡಾದ ಕನ್ನಡಿಗರ ಅಂತ್ಯಕ್ರಿಯೆ

ಬೆಂಗಳೂರು: ಉಗ್ರರ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗದ ಮಂಜುನಾಥ ರಾವ್‌ ಹಾಗೂ ಬೆಂಗಳೂರಿನ ಭರತ್‌ ಭೂಷಣ್‌ ಅವರ ಮೃತದೇಹಗಳನ್ನು ಗುರುವಾರ ರಾಜ್ಯಕ್ಕೆ ಕರೆತಂದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ದಾಳಿಯಲ್ಲಿ ಮೃತಪಟ್ಟಿದ್ದ ಬೆಂಗಳೂರಿನ ಟೆಕಿ ಮಧುಸೂದನ್‌ ರಾವ್‌ ಅವರ ಮೃತದೇಹವನ್ನು ಅವರ ಸ್ವಂತ ಊರು ಚೆನ್ನೈಗೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು.

ಪಾಕ್‌ ಪ್ರತೀಕಾರದ ಕ್ರಮ

ಇಸ್ಲಾಮಾಬಾದ್ (ಪಿಟಿಐ): ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತವು ತನ್ನ ವಿರುದ್ಧ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಕೂಡಾ ಕೆಲವು ಪ್ರತೀಕಾರದ
ನಿರ್ಧಾರಗಳನ್ನು ಗುರುವಾರ ಘೋಷಿಸಿದೆ.

ಶಿಮ್ಲಾ ಒಡಂಬಡಿಕೆ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿರಿಸುವುದು ಹಾಗೂ ಭಾರತದ ಜತೆಗಿನ ಎಲ್ಲ ರೀತಿಯ ವ್ಯಾಪಾರ ಸಂಬಂಧ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಸಿಂಧೂ ನದಿ ನೀರನ್ನು ತಡೆಯಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು ‘ಯುದ್ಧಕ್ಕೆ ಸಮನಾದ ಕೃತ್ಯ’ ಎಂದು ಪರಿಗಣಿಸುವುದಾಗಿಯೂ ಪಾಕಿಸ್ತಾನ ಎಚ್ಚರಿಸಿದೆ. 

ಪ್ರಧಾನಿ ಶೆಹಬಾಜ್‌ ಷರೀಫ್ ನೇತೃತ್ವದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕ್‌ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಸಚಿವರು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

ಮೋದಿ ಭಾಷಣದ ಪ್ರಮುಖ ಅಂಶಗಳು

l ಮುಗ್ಧ ನಾಗರಿಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಬಗ್ಗೆ ಇಡೀ ದೇಶವೇ ಶೋಕಿಸುತ್ತಿದೆ. ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೆ ಪ್ರತಿಯೊಬ್ಬ ಭಾರತೀಯರಲ್ಲಿ ದುಃಖ, ಆಕ್ರೋಶ ಮಡುಗಟ್ಟಿದೆ

l ದೇಶದ ಅಭಿವೃದ್ಧಿಗೆ ಶಾಂತಿ ಮತ್ತು ಭದ್ರತೆ ಅತ್ಯಗತ್ಯ 

l ನಾನು ಅಧಿಕಾರದಲ್ಲಿ ಇರುವವರೆಗೆ ಭಯೋ ತ್ಪಾದನೆಯನ್ನು ಮಟ್ಟ ಹಾಕದೇ ಬಿಡುವುದಿಲ್ಲ

l ಮಾನವೀಯ ಮೌಲ್ಯಗಳ ಮೇಲೆ ನಂಬಿಕೆವುಳ್ಳವರು ನಮ್ಮೊಂದಿಗೆ ಇದ್ದಾರೆ

ವೀಸಾ ರದ್ದು; ಸಿಖ್ಖರಿಗೆ ವಿನಾಯಿತಿ

* ಭಾರತದ ‍ಪ್ರಜೆಗಳಿಗೆ ಸಾರ್ಕ್‌ ವೀಸಾ ವಿನಾಯಿತಿ ಯೋಜನೆಯ ಅಡಿಯಲ್ಲಿ (ಎಸ್‌ವಿಇಎಸ್) ನೀಡಿರುವ ವೀಸಾ ರದ್ದು 

* ಎಸ್‌ವಿಇಎಸ್‌ ಅಡಿಯಲ್ಲಿ ಪಾಕ್‌ನಲ್ಲಿರುವ ಭಾರತೀಯ ಪ್ರಜೆಗಳು 48 ಗಂಟೆಗಳ ಒಳಗಾಗಿ ದೇಶ ತೊರೆಯಲು ಸೂಚನೆ

* ಆದರೆ, ಸಿಖ್‌ ಯಾತ್ರಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ

* ಪಾಕಿಸ್ತಾನದಲ್ಲಿರುವ ಭಾರತದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರಿಗೆ ಏ.30ರ ಒಳಗಾಗಿ ದೇಶ ಬಿಡಲು ಸೂಚನೆ

* ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಯ ಸಂಖ್ಯೆ 30ಕ್ಕೆ ಕಡಿತಗೊಳಿಸಲು ನಿರ್ಧಾರ

* ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಮಾಡುವ ಎಲ್ಲಾ ವ್ಯಾಪಾರಗಳು ತಕ್ಷಣದಿಂದಲೇ ಸ್ಥಗಿತ

‘ಸಾರ್ವಭೌಮತ್ವ ಉಲ್ಲಂಘಿಸಲು ಬಿಡೆವು’

ಭಯೋತ್ಪಾದನೆಯನ್ನು, ಅದು ಯಾವುದೇ ರೂಪದಲ್ಲಿದ್ದರೂ ಖಂಡಿಸುತ್ತೇವೆ ಮತ್ತು ಶಾಂತಿಗೆ ಬದ್ಧವಾಗಿದ್ದೇವೆ. ಆದರೆ, ದೇಶದ ಸಾರ್ವಭೌಮತ್ವ, ಭದ್ರತೆ ಮತ್ತು ಘನತೆಯನ್ನು ಅತಿಕ್ರಮಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.

‘ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಅದರ ಜನರ ಭದ್ರತೆಗೆ ಯಾವುದೇ ಬೆದರಿಕೆ ಎದುರಾದರೆ, ಅದಕ್ಕೆ ಪ್ರತೀಕಾರ ತೀರಿಸಲು ಸಿದ್ಧರಿದ್ದೇವೆ. ಪಹಲ್ಗಾಮ್‌ನಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಭಾರತವು ತನ್ನ ಸಂಕುಚಿತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸುವುದನ್ನು ನಿಲ್ಲಿಸಬೇಕು’ ಎಂದಿದೆ.

ಮೃತ ಕನ್ನಡಿಗರ ಅಂತ್ಯಕ್ರಿಯೆ

ಬೆಂಗಳೂರು: ಉಗ್ರರ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗದ ಮಂಜುನಾಥ ರಾವ್‌ ಹಾಗೂ ಬೆಂಗಳೂರಿನ ಭರತ್‌ ಭೂಷಣ್‌ ಅವರ ಮೃತದೇಹ ಗಳನ್ನು ಗುರುವಾರ ರಾಜ್ಯಕ್ಕೆ ಕರೆತಂದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ದಾಳಿಯಲ್ಲಿ ಮೃತಪಟ್ಟಿದ್ದ ಬೆಂಗಳೂರಿನ ಟೆಕಿ ಮಧುಸೂದನ್‌ ರಾವ್‌ ಅವರ ಮೃತದೇಹವನ್ನು ಅವರ ಸ್ವಂತ ಊರು ಚೆನ್ನೈಗೆ ಒಯ್ದು ಅಂತ್ಯಕ್ರಿಯೆ ನಡೆಸಲಾಯಿತು.

ಗುಪ್ತಚರ ವೈಫಲ್ಯವೇ‌ ಕಾರಣ: ವಿಪಕ್ಷ ಟೀಕೆ

ಘಟನೆಗೆ ಗುಪ್ತಚರ ವೈಫಲ್ಯವೇ ಕಾರಣ ಎಂದು ವಿರೋಧಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಘಟನಾ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂಬ ದೂರೂ ಕೇಳಿ ಬಂದಿದೆ.

140 ಕೋಟಿ ಭಾರತೀಯರ ಇಚ್ಛಾಶಕ್ತಿಯು ಭಯೋತ್ಪಾದನೆ ಪೋಷಿಸುತ್ತಿರುವವರ ಹೆಡೆಮುರಿ ಕಟ್ಟಲಿದೆ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.