ADVERTISEMENT

ಪಹಲ್ಗಾಮ್‌ ದಾಳಿಕೋರರಿಗೆ ಆಶ್ರಯ: ಆರೋಪಿಗಳ ಬಂಧನ ಅವಧಿ ವಿಸ್ತರಿಸಿದ NIA ನ್ಯಾಯಾಲಯ

ಪಿಟಿಐ
Published 19 ಸೆಪ್ಟೆಂಬರ್ 2025, 10:48 IST
Last Updated 19 ಸೆಪ್ಟೆಂಬರ್ 2025, 10:48 IST
<div class="paragraphs"><p>ಎನ್‌ಐಎ</p></div>

ಎನ್‌ಐಎ

   

ಪಿಟಿಐ ಚಿತ್ರ

ಜಮ್ಮು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳ ಬಂಧನ ಅವಧಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ವಿಶೇಷ ನ್ಯಾಯಾಲಯ ಹೆಚ್ಚುವರಿಯಾಗಿ 45 ದಿನಗಳಿಗೆ ವಿಸ್ತರಿಸಿದೆ.

ADVERTISEMENT

ಪಹಲ್ಗಾಮ್‌ನ ಬೈಸರನ್ ಮೂಲದ ಬಶೀರ್ ಅಹ್ಮದ್ ಜೋತಾತ್ ಮತ್ತು ಬಟ್ಕೋಟ್‌ನ ಪರ್ವೈಜ್‌ ಅಹ್ಮದ್ ಎಂಬಿಬ್ಬರ ತನಿಖೆ ಮತ್ತು ಬಂಧನ ಅವಧಿಯನ್ನು ವಿಶೇಷ ನ್ಯಾಯಾಧೀಶ ಸಂದೀಪ್ ಗಂಡೋತ್ರಾ ಅವರು ಗುರುವಾರ ವಿಸ್ತರಿಸಿದ್ದಾರೆ.

ಆರೋಪದ ಆಧಾರದಲ್ಲಿ ತನಿಖೆ ನಡೆಸುವುದು, ಡಿಎನ್‌ಎ ಪ್ರೊಫೈಲ್‌, ವಿಧಿವಿಜ್ಞಾನ ವರದಿಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಕಸ್ಟಡಿ ಅವಧಿಯನ್ನು ವಿಸ್ತರಿಸುವುದು ಮತ್ತು ತನಿಖೆಯನ್ನು ಮುಂದುವರಿಸುವುದು ಸೂಕ್ತ ಎಂದು ನ್ಯಾಯಾಲಯ ಮೇಲ್ನೊಟಕ್ಕೆ ಅಭಿಪ್ರಾಯಪಟ್ಟಿತು.

‘ಆರೋಪಿಗಳಿಗೆ ಈವರೆಗೂ ನೀಡಿದ್ದ 90 ದಿನಗಳ ಕಸ್ಟಡಿಯನ್ನು ಮತ್ತೆ 45 ದಿನಗಳಿಗೆ ವಿಸ್ತರಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.

ಹಿಂದಿನ ಬಂಧನದ ಅವಧಿ ಮುಕ್ತಾಯದ ಬಳಿಕ, ಆರೋಪಿಗಳನ್ನು ಸೆ. 18ರಂದು ವರ್ಚುವಲ್ ವೇದಿಕೆ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಕ್ರಮ ಚಟುವಟಿಕೆಗಳ ಕಾಯ್ದೆಯಡಿ ಕಸ್ಟಡಿ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸುವಂತೆ ಕೋರಿ ಎನ್‌ಐಎ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದನ್ ಕುಮಾರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. 

‘ಸಾಕ್ಷಿಗಳ ಹೇಳಿಕೆ, ವಿಧಿವಿಜ್ಞಾನ ವರದಿ, ವಶಪಡಿಸಿಕೊಂಡ ಕಂಬಳಿ ಮತ್ತು ಶಾಲುಗಳ ಡಿಎನ್‌ಎ ಪ್ರೊಫೈಲಿಂಗ್ ಬಾಕಿ ಇದೆ. ಪಾಕಿಸ್ತಾನ ಮೂಲದ ಸಂಖ್ಯೆಗಳಿಗೆ ಸಂಬಂಧಿಸಿದ ಮೊಬೈಲ್ ದತ್ತಾಂಶ ವಿಶ್ಲೇಷಣೆ ಸೇರಿದಂತೆ ಪ್ರಮುಖ ಸಾಕ್ಷ್ಯಗಳು ಇನ್ನೂ ಬಾಕಿ ಉಳಿದಿವೆ. ಜುಲೈ 28ರಂದು ನಡೆದ ಎನ್‌ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರನ್ನು ಯೋಧರು ಹೊಡೆದುರುಳಿಸಿದ್ದರು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತರು ಇರುವ ಸಾಧ್ಯತೆಗಳಿವೆ’ ಎಂದು ಪ್ರಾಸಿಕ್ಯೂಷನ್ ಹೇಳಿತು.

‘ಆರೋಪಿಗಳಿಂದ ಕೆಲ ಮೊಬೈಲ್ ಫೋನ್ ಮತ್ತು ಪಾಕಿಸ್ತಾನದ ಸಂಖ್ಯೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಜೋತತ್ ಮತ್ತು ಅಹ್ಮದ್ ಬಳಿ ಇದ್ದ ಶಾಲು, ಕಂಬಳಿ ಮತ್ತು ಬೆಡ್‌ಶೀಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳು ಹತ್ಯೆಗೀಡಾದ ಸೈನಿಕರ ಡಿಎನ್‌ಎ ಮಾದರಿಯೊಂದಿಗೆ ಹೋಲಿಕೆಯಾಗಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಯನ್ನು ಸಿಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 

ಏಪ್ರಿಲ್ 22ರಂದು ಪಹಲ್ಗಾಮ್‌ ಬೈಸರನ್‌ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನೇಪಾಳ ಪ್ರಜೆ ಸೇರಿ 26 ಮಂದಿ ಮೃತಪಟ್ಟಿದ್ದರು. ಜೂನ್ 22ರಂದು ಬಶೀರ್ ಅಹ್ಮದ್ ಜೋತಾತ್ ಮತ್ತು ಪರ್ವೈಜ್‌ ಅಹ್ಮದ್ ಅವರನ್ನು ಎನ್‌ಐಎ ಬಂಧಿಸಿತ್ತು. ಸದ್ಯ ಇವರಿಬ್ಬರು ಜಮ್ಮುವಿನ ಅಂಫಲ್ಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತನ್ನು ಎನ್‌ಐಎ ಬಹಿರಂಗಪಡಿಸಿದೆ. ಇವರು ನಿಷೇಧಿತ ಲಷ್ಕರ್ ಎ ತಯಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನದ ಪ್ರಜೆಗಳು ಎಂದು ಎನ್‌ಐಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.