ADVERTISEMENT

ಪಹಲ್ಗಾಮ್‌ ದಾಳಿ: ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳು ಕಸ್ಟಡಿಗೆ

ಪಿಟಿಐ
Published 23 ಜೂನ್ 2025, 14:50 IST
Last Updated 23 ಜೂನ್ 2025, 14:50 IST
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)   

ಜಮ್ಮು: ಪಹಲ್ಗಾಮ್‌ ಉಗ್ರರ ದಾಳಿ ಸಂಬಂಧ ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಐದು ದಿನಗಳ ಕಸ್ಟಡಿಗೆ ನೀಡಿ ಸ್ಥಳೀಯ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಪಹಲ್ಗಾಮ್‌ನ ಬಟ್‌ಕೋಟೆಯಿಂದ ಪರ್ವೈಜ್‌ ಅಹ್ಮದ್‌ ಜೋಥರ್‌ ಮತ್ತು ಪಹಲ್ಗಾಮ್‌ನ ಹಿಲ್‌ಪಾರ್ಕ್‌ ಬಳಿಯ ಬಶೀರ್‌ ಅಹ್ಮದ್‌ ಜೋಥರ್‌ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿತ್ತು. 

ಜಮ್ಮುವಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ರಿತೇಶ್‌ ಕುಮಾರ್‌ ದುಬೆ ಎದುರು ಇಬ್ಬರು ಆರೋಪಿಗಳನ್ನು ಹಾಜರುಪಡಿಸಿದ್ದು, ಜೂನ್‌ 27ರವರೆಗೆ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ADVERTISEMENT

ಬಂಧಿತ ಆರೋಪಿಗಳು ದಾಳಿ ನಡೆಸಿದ ಭಯೋತ್ಪಾದಕರ ಗುರುತುಗಳನ್ನು ಬಹಿರಂಗಪಡಿಸಿದ್ದು, ಅವರು ಪಾಕ್‌ ಮೂಲದ ನಿಷೇಧಿತ ಲಷ್ಕರ್‌–ಎ–ತಯಬಾಗೆ (ಎಲ್‌ಇಟಿ) ಸೇರಿದವರು ಎಂಬುದನ್ನು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರಿಗೆ ಈ ಆರೋಪಿಗಳು ಆಶ್ರಯ, ಆಹಾರ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಿದ್ದರು. 

ಏಪ್ರಿಲ್‌ 22ರಂದು ನಡೆದಿದ್ದ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.