ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರ ಬಿಡಿಸಿ, ಉಡುಗೊರೆಯಾಗಿ ನೀಡಿರುವುದು ಗಮನ ಸೆಳೆದಿದೆ.
ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಭಾಗಿಯಾದ ಮೋದಿ, ರಾಜ್ಯದ ₹47,600 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ವಿದ್ಯಾರ್ಥಿನಿಯೊಬ್ಬಳು 'ಆಪರೇಷನ್ ಸಿಂಧೂರ'ದ ಚಿತ್ರವನ್ನು ಬಿಡಿಸಿ ಕಾರ್ಯಕ್ರಮಕ್ಕೆ ತಂದಿದ್ದಳು. ಸಭೆಯ ನಡುವೆ ವಿದ್ಯಾರ್ಥಿನಿ, ಮೋದಿ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದಳು. ತಮ್ಮ ಭಾಷಣದ ನಡುವೆಯೇ ವಿದ್ಯಾರ್ಥಿನಿ ತಂದಿದ್ದ ಫೋಟೊವನ್ನು ತೆಗೆದುಕೊಂಡು ಬರುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಆಪರೇಷನ್ ಸಿಂಧೂರದ ಬಗೆಗಿನ ವಿದ್ಯಾರ್ಥಿನಿಯ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಫೋಟೊ ಜತೆಗೆ ಹೆಸರು ಮತ್ತು ವಿಳಾಸವನ್ನು ನಮೂದಿಸಿಲು ಮೋದಿ ವೇದಿಕೆಯಿಂದಲೇ ತಿಳಿಸಿದ್ದರು.
ವಿದ್ಯಾರ್ಥಿನಿಗೆ ಪತ್ರ ಕಳುಹಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಇದೇ ಸಮಾವೇಶದಲ್ಲಿ ಮತ್ತೊಬ್ಬ ಹುಡುಗನು ಫೋಟೊ ಹಿಡಿದುಕೊಂಡಿರುವುದನ್ನು ಗಮನಿಸಿದ ಮೋದಿ, ನಿಮ್ಮ ಭುಜಗಳಿಗೆ ನೋವು ಬರಬಹುದು ಕೈಗಳನ್ನು ಕೆಳಗಿಳಿಸಿ ಎಂದು ಮೋದಿ ಪ್ರೀತಿಯಿಂದ ಹೇಳಿದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.