ನವದೆಹಲಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ (ಮಧ್ಯದಲ್ಲಿರುವವರು) ಮಾಹಿತಿ ನೀಡಿದರು. ಏರ್‌ಮಾರ್ಷಲ್ ಎ.ಕೆ. ಭಾರ್ತಿ, ವೈಸ್ ಆಡ್ಮಿರಲ್ ಎ.ಎನ್. ಪ್ರಮೋದ್ ಹಾಜರಿದ್ದರು
ಪಿಟಿಐ ಚಿತ್ರ
ನವದೆಹಲಿ: ‘ನಾವು ನಿಗದಿಪಡಿಸಿದ ಗುರಿ ಸಾಧಿಸಿದ್ದೇವೆ. ನಮ್ಮ ಎಲ್ಲ ಪೈಲಟ್‌ಗಳು ಮರಳಿ ಮನೆಗೆ ಬಂದಿದ್ದಾರೆ’ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.
‘ಮೇ 7ರಂದು ಭಾರತೀಯ ಸೇನೆಯು ಪಾಕಿಸ್ತಾನದ ಮುಖ್ಯ ತಾಣಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್, ಮುದಸೀರ್ ಅಹಮದ್ ಸೇರಿದಂತೆ 100ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ’ ಎಂದು ಮಾಹಿತಿ ನೀಡಿದೆ.
‘ಒಂಬತ್ತು ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು, ಎಚ್ಚರಿಕೆಯಿಂದ ನಿಖರವಾದ ದಾಳಿ ನಡೆಸಲಾಗಿತ್ತು’ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮೇ 7ರಿಂದ 10ರವರೆಗೆ ಭಾರತದ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 35ರಿಂದ 40 ಮಂದಿ ಯೋಧರು ಮೃತಪಟ್ಟಿದ್ದಾರೆ. ಭಾರತವು ತನ್ನ ನಿರ್ದಿಷ್ಟ ಗುರಿಯನ್ನು ಸಾಧಿಸಿದೆ. ಮತ್ತೆ ಇಂತಹ ದುಸ್ಸಾಹಸ ಮುಂದುವರಿಸಿದರೆ, ಪಾಕಿಸ್ತಾನವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತದ ಯುದ್ಧ ವಿಮಾನಗಳನ್ನು ಪಾಕ್ ಪಡೆಗಳು ಹೊಡೆದುರುಳಿಸಿವೆ ಎಂಬ ವಿದೇಶಿ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಅವರು, ‘ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ. ನಷ್ಟಗಳು ಯುದ್ಧದ ಭಾಗವಾಗಿದೆ’ ಎಂದು ಏರ್‌ಮಾರ್ಷಲ್ ಎ.ಕೆ. ಭಾರ್ತಿ ತಿಳಿಸಿದರು.
ಡಿಜಿಎಂಒ ರಾಜೀವ್ ಘಯಿ ಹೇಳಿದ್ದೇನು?
*ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳ ಐವರು ಯೋಧರನ್ನು ಕಳೆದುಕೊಂಡಿದ್ದೇವೆ. ಅವರ ತ್ಯಾಗವನ್ನು ಸದಾ ನೆನಪಿನಲ್ಲಿಡಲಾಗುತ್ತದೆ.
*ಕದನ ವಿರಾಮ ನಡೆಸುವಂತೆ ಶನಿವಾರ ಮಧ್ಯಾಹ್ನ ಪಾಕಿಸ್ತಾನದ ಡಿಜಿಎಂಒ ಕರೆಮಾಡಿದ್ದರು. ಸಂಜೆ 5 ಗಂಟೆಯಿಂದಲೇ ಅನ್ವಯವಾಗುವಂತೆ ಭೂ, ನೌಕಾ, ವಾಯುದಾಳಿ ನಿಲ್ಲಿಸಲು ಎರಡು ಕಡೆಗಳಿಂದಲೂ ಒಪ್ಪಿಗೆ
*ಮಾತುಕತೆಗೆ ಒಪ್ಪಿದ ಬಳಿಕ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ; ಅಲ್ಲಿನ ಸೇನಾ ನೆಲೆಗಳಾದ ರಫೀಖಿ, ಚಾಕ್ವಾಲ್, ಮುರಿದ್, ರಹೀಮ್ ಯಾರ್ ಖಾನ್, ಸುಕ್ಕೂರ್, ಚುನಿಯಾನ್ ಕೇಂದ್ರಗಳ ಮೇಲೆ ಭಾರತದಿಂದ ಪ್ರತಿದಾಳಿ
*ಮೇ 9–10ರ ರಾತ್ರಿ ವೇಳೆ ಭಾರತದ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು, ಪಾಕಿಸ್ತಾನದಿಂದ ದಾಳಿ
ನವದೆಹಲಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ (ಮಧ್ಯದಲ್ಲಿರುವವರು) ಮಾಹಿತಿ ನೀಡಿದರು. ಏರ್‌ಮಾರ್ಷಲ್ ಎ.ಕೆ. ಭಾರ್ತಿ, ವೈಸ್ ಆಡ್ಮಿರಲ್
ಎ.ಎನ್. ಪ್ರಮೋದ್ ಹಾಜರಿದ್ದರು
‘ಪಾಕ್ ವಿಮಾನ ಹೊಡೆದುರುಳಿಸಿದ್ದೇವೆ’
‘ಪಾಕಿಸ್ತಾನದ ವಿಮಾನಗಳು ಭಾರತರ ವಾಯುಪ್ರದೇಶ ಪ್ರವೇಶಿಸುವುದನ್ನು ತಡೆದಿದ್ದೇವೆ. ನಮ್ಮಲ್ಲಿ ಅವರ ಯುದ್ಧವಿಮಾನಗಳ ಅವಶೇಷಗಳಿಲ್ಲ. ಆದರೂ ಅವರ ಕೆಲವು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ’ ಎಂದು ಏರ್‌ಮಾರ್ಷಲ್ ಎ.ಕೆ. ಭಾರ್ತಿ ತಿಳಿಸಿದ್ದಾರೆ
‘ನಾವು ನಿಗದಿಪಡಿಸಿದ ಗುರಿ ಸಾಧಿಸಿದ್ದೇವೆ. ನಮ್ಮ ಎಲ್ಲ ಪೈಲಟ್‌ಗಳು ಮರಳಿ ಮನೆಗೆ ಬಂದಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವರು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರ ಜತೆ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ ಅವರ ಭದ್ರತಾ ಪರಿಸ್ಥಿತಿಗಳ ಪರಿಶೀಲನೆ ನಡೆಸಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಮೋದಿ ಅವರು ಈ ಸಭೆ ನಡೆಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಸೇನಾ ಪಡೆ, ವಾಯು ಪಡೆ ಮತ್ತು ನೌಕಾ ಪಡೆಯ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ್ದರು. ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
‘ನೌಕಾಪಡೆಯ ಗುರಿ ಕರಾಚಿಯಾಗಿತ್ತು’
ನವದೆಹಲಿ: ಪಾಕಿಸ್ತಾನವು ಸಂಘರ್ಷವನ್ನು ಮುಂದುವರಿಸಿದ್ದರೆ, ದೇಶದ ಆರ್ಥಿಕ ಹಬ್ ಆಗಿರುವ ಕರಾಚಿ ಮೇಲೆ ದಾಳಿ ನಡೆಸುವುದು ಭಾರತೀಯ ನೌಕಾಪಡೆಯ ಗುರಿಯಾಗಿತ್ತು ಎಂದು ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
‘ನಮ್ಮ ಪಡೆಗಳು ಉತ್ತರ ಅರಬ್ಬೀ ಸಮುದ್ರದಲ್ಲಿ ತೀವ್ರವಾಗಿ ಆಕ್ರಮಣ ಮಾಡಲು ಸಾಕಷ್ಟು
ಸಿದ್ಧತೆಗಳೊಂದಿಗೆ ನಿಯೋಜಿತವಾಗಿದ್ದವು. ಕರಾಚಿ ಸೇರಿದಂತೆ ಸಮುದ್ರ ಮತ್ತು ಭೂಮಿಯ ಮೇಲಿನ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸಲು ಸಂಪೂರ್ಣವಾಗಿ ಸನ್ನದ್ಧವಾಗಿದ್ದವು’ ಎಂದು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ಅಡ್ಮಿರಲ್ ಎ.ಎನ್.ಪ್ರಮೋದ್ ಹೇಳಿದರು.
ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ ಅವರು, ‘ಭಾರತೀಯ ನೌಕಾಪಡೆಯು ಪಾಕಿಸ್ತಾನದ ಬಹುತೇಕ ಬಂದರುಗಳ ಮೇಲೆ ನಿಗಾ ಇಟ್ಟಿತ್ತು. ಪಾಕ್ ಸೇನಾ ನೆಲೆಗಳ ಚಲನವಲನಗಳ ಬಗ್ಗೆ ನೌಕಾಪಡೆಗೆ ಸಂಪೂರ್ಣ ಅರಿವಿತ್ತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.