ನವದೆಹಲಿ: ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿದೆ. ಇದರಿಂದ ದೇಶೀಯ ವಿಮಾನಯಾನ ಕಪನಿಗಳಾದ ಏರ್ ಇಂಡಿಯಾ ಮತ್ತು ಇಂಡಿಗೊದ ಅಂತರರಾಷ್ಟ್ರೀಯ ವಿಮಾನ ಪ್ರಯಾಣ ದರವು ದುಬಾರಿಯಾಗುವ ಸಾಧ್ಯತೆಯಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಿಂದಾಗಿ ಉಭಯ ರಾಷ್ಟ್ರಗಳು ಪರಸ್ಪರ ವ್ಯಾಪಾರ ಒಪ್ಪಂದಗಳಿಗೆ ನಿರ್ಬಂಧ ಹೇರಿವೆ.
ಪಾಕಿಸ್ತಾನಕ್ಕೆ ಸೇರಿದ ವಾಯುಪ್ರದೇಶದ ಮೂಲಕವೇ ಈ ಎರಡು ವಿಮಾನಯಾನ ಕಂಪನಿಗಳಿಗೆ ಸೇರಿದ ಅಂತರರಾಷ್ಟ್ರೀಯ ವಿಮಾನಗಳು ಸಂಚಾರ ನಡೆಸುತ್ತವೆ. ಸದ್ಯ ನಿರ್ಬಂಧ ಹೇರಿರುವುದರಿಂದ ಇಂಧನ ವೆಚ್ಚ ಹೆಚ್ಚಳವಾಗಲಿದೆ. ಜೊತೆಗೆ, ನಿಗದಿತ ಸ್ಥಳಗಳಿಗೆ ಹಾರಾಟವು ದೀರ್ಘ ಸಮಯ ಹಿಡಿಯಲಿದೆ ಎಂದು ಹೇಳಲಾಗಿದೆ.
ಆದರೆ, ಪಾಕಿಸ್ತಾನದ ನಿರ್ಧಾರವು ಅಂತರರಾಷ್ಟ್ರೀಯ ವಿಮಾನಯಾನ ಕಂಪನಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ.
ನ್ಯೂಯಾರ್ಕ್, ಅಜರ್‌ಬೈಜಾನ್ ಮತ್ತು ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಮತ್ತು ಇಂಡಿಗೊ ಕಂಪನಿಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದಲ್ಲಿಯೇ ಹಾರಾಟ ನಡೆಸುತ್ತಿದ್ದವು ಎಂದು ವಿಮಾನಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಒದಗಿಸುವ ಫ್ಲೈಟ್‌ರೇಡಾರ್24 ಡಾಟ್ ಕಾಂ ತಿಳಿಸಿದೆ. ಪ್ರಸಕ್ತ ತಿಂಗಳಿನಲ್ಲಿ ನವದೆಹಲಿ ವಿಮಾನ ನಿಲ್ದಾಣದಿಂದ 1,200ಕ್ಕೂ ಹೆಚ್ಚು ವಿಮಾನಗಳು ಯುರೋಪ್, ಪಶ್ಚಿಮ ಏಷ್ಯಾ ಮತ್ತು ಉತ್ತರ ಅಮೆರಿಕಕ್ಕೆ ಸಂಚರಿಸಲು ಸಮಯ ನಿಗದಿಯಾಗಿದೆ. ಇವುಗಳ ಮೇಲೆ ಪಾಕಿಸ್ತಾನ ಹೇರಿರುವ ನಿರ್ಬಂಧವು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.