ಜೈಪುರ: ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಅನುಮಾನದ ಮೇಲೆ ಅಂತರರಾಷ್ಟ್ರೀಯ ಗಡಿ ಸಮೀಪ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸೈಮ್ ಪ್ರದೇಶದ ನಿವಾಸಿ ನವಾಬ್ ಖಾನ್‌ನನ್ನು ಭಾನುವಾರ ಬಂಧಿಸಲಾಗಿದೆ.
ಭಾರತ–ಪಾಕಿಸ್ತಾನ ಗಡಿ ಭಾಗದ ಖಾನ್, ಜೀಪ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆತ ಬೇಹುಗಾರಿಕೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಎಂದು ಗುಪ್ತಚರ ದಳದ ಹೆಚ್ಚುವರಿ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.
ವಾಟ್ಸ್‌ಆ್ಯಪ್ ಮೂಲಕ ಖಾನ್ ಪಾಕಿಸ್ತಾನ ವ್ಯಕ್ತಿಗಳಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ. ಗೂಢಲಿಪಿ ಬಳಸಿ ಮಾಹಿತಿ ರವಾನಿಸುತ್ತಿದ್ದ ಹಾಗೂ ಅದಕ್ಕಾಗಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ(ಐಎಸ್‌ಐ)ಯ ಏಜೆಂಟ್ ಒಬ್ಬನನ್ನು ಖಾನ್ ಕಳೆದ ವರ್ಷ ಪಾಕಿಸ್ತಾನದಲ್ಲಿ ಭೇಟಿ ಮಾಡಿ ಸಂಪರ್ಕ ಬೆಳೆಸಿಕೊಂಡಿದ್ದ. ಮಾಹಿತಿ ಸಂಗ್ರಹಿಸುವುದು ಹಾಗೂ ಅದನ್ನು ಹಂಚಿಕೊಳ್ಳುವ ಬಗೆಗೆಐಎಸ್‌ಐ ಏಜೆಂಟ್ ತರಬೇತಿ ನೀಡಿ,ಭಾರತೀಯ ಸೇನೆ ಚಲನವಲನದ ಮೇಲೆ ನಿಗಾವಹಿಸಿ ಮಾಹಿತಿ ರವಾನಿಸುವ ಕೆಲಸಕ್ಕೆ ನಿಯೋಜಿಸಿದ್ದ ಎಂದು ಮಿಶ್ರಾ ಹೇಳಿದ್ದಾರೆ.
ಭದ್ರತಾ ಸಂಸ್ಥೆಗಳ ತಂಡಗಳು ಖಾನ್‌ನನ್ನು ವಿಚಾರಣೆ ಒಳಪಡಿಸಿದ ಬಳಿಕ ಆತನನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.