ADVERTISEMENT

ಸಂಸತ್‌ ಭವನದ ಮೇಲೆ ದಾಳಿ ಪ್ರಕರಣ: ಅಧ್ಯಕ್ಷ ಅಲ್ವಿ, ಸಚಿವ ಖುರೇಶಿ ಖುಲಾಸೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 21:34 IST
Last Updated 15 ಮಾರ್ಚ್ 2022, 21:34 IST

ಇಸ್ಲಾಮಾಬಾದ್‌: ಸಂಸತ್‌ ಭವನದ ಮೇಲೆ 2014ರಲ್ಲಿ ದಾಳಿ ನಡೆಸಿದ ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಅಧ್ಯಕ್ಷ ಆರಿಫ್ ಅಲ್ವಿ ಮತ್ತು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಸೇರಿದಂತೆ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕರನ್ನು ಮಂಗಳವಾರ ಖುಲಾಸೆಗೊಳಿಸಿದೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕರಾದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್, ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ಕಾರ್ಮಿಕ ಮತ್ತು ಸಂಸ್ಕೃತಿ ಸಚಿವ ಶೌಕತ್ ಅಲಿ ಯೂಸುಫ್‌ಜಾಯ್, ಸಂಸದ ಎಜಾಜ್ ಅಹ್ಮದ್ ಚೌಧರಿ ಮತ್ತು ಇತರರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ ಎಂದು ‘ಡಾನ್’ ನ್ಯೂಸ್ ವರದಿ ಮಾಡಿದೆ.

ಅಧ್ಯಕ್ಷ ಅಲ್ವಿ ಹಾಗೂ ಇತರ ನಾಯಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಮೊಹಮ್ಮದ್ ಅಲಿ ವಾರೈಚ್ ಅವರು ಈ ಆದೇಶ ಪ್ರಕಟಿಸಿದರು.

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿ, ಪಿಟಿಐ ಮುಖ್ಯಸ್ಥರೂ ಆಗಿರುವ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 2020ರ ಅಕ್ಟೋಬರ್‌ನಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.

ಆಗಸ್ಟ್ 31, 2014ರಂದು, ಅಂದಿನ ವಿರೋಧ ಪಕ್ಷವಾಗಿದ್ದ ಪಿಟಿಐ ಮತ್ತು ಪಾಕಿಸ್ತಾನ್ ಅವಾಮಿ ತೆಹ್ರೀಕ್ (ಪಿಎಟಿ) ನಾಯಕರು ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಪಿಟಿವಿ ಮತ್ತು ಸಂಸತ್ ಭವನದ ಆವರಣದ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಗಂಭೀರವಾಗಿ ಹಲ್ಲೆ ಸಹ ನಡೆಸಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಪ್ರಧಾನಿ ಇಮ್ರಾನ್‌ ಖಾನ್‌, ಅಲ್ವಿ, ಪಿಎಟಿ ಮುಖ್ಯಸ್ಥ ತಾಹಿರುಲ್ ಖಾದ್ರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.