ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ
ಶ್ರೀನಗರ/ಕಟ್ರಾ: ‘ಆಪರೇಷನ್ ಸಿಂಧೂರ’ದ ಅಡಿ ನಡೆಸಿದ ನಿರ್ದಿಷ್ಟ ವಾಯುದಾಳಿಗಳು ಪಾಕಿಸ್ತಾನದ ಉಗ್ರರ ಪಾಲಿಗೆ ದುಃಸ್ವಪ್ನವಾಗಿದ್ದವು. ಈ ಕಾರ್ಯಾಚರಣೆಯಿಂದಾಗಿ ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನೆಯ ದಿನಗಳು ಅಂತ್ಯಗೊಂಡಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಉಲ್ಲೇಖಿಸಿದ ಮೋದಿ, ‘ತಿಂಗಳ ಹಿಂದಷ್ಟೆ ಪಾಕಿಸ್ತಾನದಲ್ಲಿನ ಉಗ್ರರು ತಮ್ಮ ಕೊನೆಯ ದಿನಗಳನ್ನು ಕಂಡರು. ಭಾರತ ತಮ್ಮ ದೇಶದೊಳಗೆ ನುಗ್ಗಿ ಉಗ್ರರ ಮೂಲಸೌಕರ್ಯಗಳನ್ನು ನಾಶ ಮಾಡುತ್ತದೆ ಎಂದು ಪಾಕಿಸ್ತಾನ ಊಹೆ ಮಾಡಿರಲಿಲ್ಲ’ ಎಂದು ಹೇಳಿದರು.
‘ಆಪರೇಷನ್ ಸಿಂಧೂರ ಮೂಲಕ ಭಾರತದ ಪಡೆಗಳು ಪಾಕಿಸ್ತಾನಕ್ಕೆ ಬಹಳ ಪ್ರಬಲ ಪ್ರತ್ಯುತ್ತರ ನೀಡಿವೆ’ ಎಂದೂ ಬಣ್ಣಿಸಿದರು.
ಚೆನಾಬ್ ನದಿಗೆ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ದೇವಸ್ಥಾನಗಳು, ಮಸೀದಿಗಳು, ಗುರುದ್ವಾರಗಳು ಹಾಗೂ ಚರ್ಚ್‌ಗಳ ಮೇಲೆ ದಾಳಿ ನಡೆಸುವ ಮೂಲಕ ನಮ್ಮಲ್ಲಿ ಒಡಕು ಮೂಡಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಆದರೆ, ದೇಶದ ಜನರಲ್ಲಿನ ಒಗ್ಗಟ್ಟು ಪಾಕಿಸ್ತಾನದ ಸಂಚುಗಳನ್ನು ವಿಫಲಗೊಳಿಸಿದೆ’ ಎಂದರು.
‘ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಭಾರತದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡಬೇಕು, ಕಾಶ್ಮೀರ ಜನರ ದುಡಿಮೆಯನ್ನು ನಾಶ ಮಾಡಬೇಕು ಎಂಬುದೇ ಪಾಕಿಸ್ತಾನದ ಉದ್ದೇಶವಾಗಿತ್ತು’ ಎಂದು ಪ್ರಧಾನಿ ಹೇಳಿದರು.
‘ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ‘ಮಾನವೀಯತೆ’ ಹಾಗೂ ‘ಕಾಶ್ಮೀರದ ಅಸ್ಮಿತೆ’ ಮೇಲೆಯೂ ದಾಳಿ ಮಾಡಿದೆ. ಕಾಶ್ಮೀರದ ಜನರು ತಮ್ಮ ಜೀವನೋಪಾಯಕ್ಕೆ ಪ್ರವಾಸೋದ್ಯಮವನ್ನೇ ಅಲವಂಬಿಸಿದ್ದಾರೆ. ಆದರೆ, ಪಾಕಿಸ್ತಾನ ಪ್ರವಾಸೋದ್ಯಮಕ್ಕೇ ಪೆಟ್ಟು ಕೊಡುವ ಮೂಲಕ ಇಲ್ಲಿನ ಜನರ ಬದುಕನ್ನು ಕಸಿಯಲು ಯತ್ನಿಸಿದೆ’ ಎಂದೂ ವಾಗ್ದಾಳಿ ನಡೆಸಿದರು.
‘ಪ್ರವಾಸೋದ್ಯಮ ಕಾಶ್ಮೀರ ಜನತೆಗೆ ಉದ್ಯೋಗ ನೀಡುವ ಜೊತೆಗೆ, ದೇಶದ ಇತರ ಜನರನ್ನು ಬೆಸೆಯುವ ಸೇತುವೆಯೂ ಆಗಿದೆ. ದುರದೃಷ್ಟವಶಾತ್, ನಮ್ಮ ನೆರೆಯ ರಾಷ್ಟ್ರವು ಮಾನವೀಯತೆ, ಸೌಹಾರ್ದ ಹಾಗೂ ಪ್ರವಾಸೋದ್ಯಮದ ಶತ್ರುವಾಗಿದೆ’ ಎಂದು ಅವರು ತಮ್ಮ ಟೀಕಾಪ್ರಹಾರವನ್ನು ಹರಿತಗೊಳಿಸಿದರು.
‘ಪ್ರವಾಸಿಗರ ಮಾರ್ಗದರ್ಶಿಗಳು, ಕುದುರೆ ಸವಾರಿ ಸೇವೆ ಒದಗಿಸುವವರು, ಅತಿಥಿ ಗೃಹಗಳ ಮಾಲೀಕರು, ಅಂಗಡಿಕಾರರು, ರಸ್ತೆ ಬದಿಯ ಢಾಬಾ ನಡೆಸುವವರಿಗೆ ಪ್ರವಾಸೋದ್ಯಮವೇ ಬದುಕಿನ ಆಧಾರ. ಅಂತಹ ಪ್ರವಾಸೋದ್ಯಮವನ್ನೇ ನಾಶ ಮಾಡುವುದಕ್ಕೆ ಪಾಕಿಸ್ತಾನ ಬಯಸಿತು. ಉಗ್ರರಿಗೆ ತಡೆಯೊಡ್ಡಿದ್ದ ಆದಿಲ್ ಕೂಡ ತನ್ನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದರು’ ಎಂದು ಮೋದಿ ಹೇಳಿದರು.
‘ಪಾಕಿಸ್ತಾನ ಬಡವರ ಬದುಕು ಮತ್ತು ದುಡಿಮೆಯ ಶತ್ರು. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಇದಕ್ಕೆ ನಿದರ್ಶನ’ ಎಂದೂ ಹರಿಹಾಯ್ದರು.
‘ಜಮ್ಮು–ಕಾಶ್ಮೀರ ಸೇರಿ ದೇಶದ ಯುವ ಜನತೆ ಆಪರೇಷನ್ ಸಿಂಧೂರದಿಂದ ಸ್ಫೂರ್ತಿ ಪಡೆಯಬೇಕು’ ಎಂದ ಮೋದಿ, ‘ಈ ಕಾರ್ಯಾಚರಣೆ ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ ಹಾಗೂ ‘ಮೇಕ್ ಇನ್ ಇಂಡಿಯಾ’ದ ಶಕ್ತಿ ಪ್ರದರ್ಶಿಸಿದೆ’ ಎಂದರು.
ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾತುಕತೆಯಲ್ಲಿ ತೊಡಗಿದ್ದರು
ಭದ್ರತೆ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕಾರಣದಿಂದ, ಜಮ್ಮು–ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತಲ್ಲದೇ, ಭಾರಿ ಬಂದೋಬಸ್ತ್ ಹಾಕಲಾಗಿತ್ತು. ಭದ್ರತಾ ಕಾರ್ಯಕ್ಕಾಗಿ ಡ್ರೋನ್ ಹಾಗೂ ಅತ್ಯಾಧುನಿಕ ಕಣ್ಗಾವಲು ಸಾಧನಗಳನ್ನು ನಿಯೋಜನೆ ಮಾಡಲಾಗಿತ್ತು.
ಆಪರೇಷನ್ ಸಿಂಧೂರ ಎಂಬ ಶಬ್ದ ಪಾಕಿಸ್ತಾನದ ಕಿವಿಗೆ ಬಿದ್ದಾಗಲೆಲ್ಲಾ ತಾನು ಅನುಭವಿಸಿದ ಅವಮಾನಕರ ಸೋಲು ಅದಕ್ಕೆ ನೆನಪಾಗಲಿದೆನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.