ADVERTISEMENT

ಕದನ ವಿರಾಮದ ಒಪ್ಪಂದ ಮುರಿದು ಮತ್ತೆ ಸಂಘರ್ಷಕ್ಕಿಳಿದ ಪಾಕ್‌! ಭಾರತ ತಕ್ಕ ಉತ್ತರ

ಪಿಟಿಐ
Published 11 ಮೇ 2025, 2:02 IST
Last Updated 11 ಮೇ 2025, 2:02 IST
<div class="paragraphs"><p>10ನೇ ದಿನವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌: ಅಪ್ರಚೋದಿತ ಗುಂಡಿನ ದಾಳಿ&nbsp; (ಪ್ರಾತಿನಿಧಿಕ ಚಿತ್ರ)</p></div>

10ನೇ ದಿನವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌: ಅಪ್ರಚೋದಿತ ಗುಂಡಿನ ದಾಳಿ  (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಸದೆಬಡಿಯಲು ಭಾರತ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧದ ಸ್ವರೂಪದ ಸಂಘರ್ಷ ಕೊನೆಗೊಳಿಸಲು ಶನಿವಾರ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕ್‌ ಮತ್ತೆ ದಾಳಿ ಆರಂಭಿಸಿದೆ. 

ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಪರಸ್ಪರ ಮಾತುಕತೆ ನಡೆಸಿ, ಶನಿವಾರ ಸಂಜೆಯಿಂದಲೇ ಸಂಘರ್ಷ ಕೊನೆಗಾಣಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಶನಿವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ ಗಡಿಪ್ರದೇಶಗಳಲ್ಲಿ ಡ್ರೋನ್‌ ದಾಳಿಗೆ ಪಾಕ್‌ ಯತ್ನ ನಡೆಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

ADVERTISEMENT

ನಿರಂತರವಾಗಿ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸಶಸ್ತ್ರ ಪಡೆಯು ಶುಕ್ರವಾರ ರಾತ್ರಿ ಹಾಗೂ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಎಂಟು ಮಿಲಿಟರಿ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಭಾರಿ ಹಾನಿ ಉಂಟು ಮಾಡಿದೆ. ಅದರ ಬೆನ್ನಲ್ಲೇ, ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರಿಗೆ ಮಧ್ಯಾಹ್ನ 3:30ಕ್ಕೆ ಕರೆ ಮಾಡಿ ಮಾತುಕತೆ ನಡೆಸಿದರು. 

‘ಅಮೆರಿಕ ಮಧ್ಯಸ್ಥಿಕೆ ಫಲ’

ವಾಷಿಂಗ್ಟನ್(ಪಿಟಿಐ): ‘ಭಾರತ–ಪಾಕಿಸ್ತಾನ ಸೇನಾ ಸಂಘರ್ಷ ಶಮನವು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಫಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವಿದೇಶಾಂಗ ಸಚಿವರಾದ ಎಸ್‌.ಜೈಶಂಕರ್ ಹಾಗೂ ಇಶಾಕ್‌ ಡಾರ್ ಹಾಗೂ ಸೇನಾ ಮುಖ್ಯಸ್ಥ ಜನರಲ್‌ ಅಸಿಮ್‌ ಮುನೀರ್‌ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

ಸನ್ನದ್ಧ ಸ್ಥಿತಿಯಲ್ಲಿ ಸೇನೆ

ನವದೆಹಲಿ: ‘ದೇಶದ ರಕ್ಷಣೆಗೆ ಸಂಬಂಧಿಸಿ ಅಗತ್ಯವೆಂದು ಕಂಡು ಬಂದ ಯಾವುದೇ ಕಾರ್ಯಾಚರಣೆ ನಡೆಸಲು ನಾವು ಸನ್ನದ್ಧ ರಾಗಿರುತ್ತೇವೆ’ ಎಂದು ಕಮಡೊರ್ ರಘು ನಾಯರ್‌ ಹೇಳಿದ್ದಾರೆ. ‘ಪಾಕಿಸ್ತಾನ ನಡೆಸುವ ಯಾವುದೇ ದುಷ್ಕೃತ್ಯಕ್ಕೆ ನಮ್ಮ ಪಡೆಗಳು ತಕ್ಕ ಉತ್ತರ ನೀಡಲಿವೆ. ಭವಿಷ್ಯದಲ್ಲಿ ನಡೆಯುವ ಯಾವುದೇ ಸಂಘರ್ಷಕ್ಕೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು’ ಎಂದೂ ಹೇಳಿದ್ದಾರೆ.

ಪಹಲ್ಗಾಮ್‌ ದಾಳಿಯಿಂದ ಸಂಘರ್ಷ ಶಮನದವರೆಗೆ

l ಏ.22: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ, ಒಟ್ಟು 26 ಪ್ರವಾಸಿಗರನ್ನು ಹತ್ಯೆ ಮಾಡಿದರು. ಇದು ಎರಡು ದೇಶಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಯಿತು

l ಏ.23: ಪಾಕಿಸ್ತಾನದೊಂದಿಗೆ ಭಾರತವು ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತು. ಗಡಿಗಳನ್ನು ಮುಚ್ಚಲಾಯಿತು, ಜಲ ಒಪ್ಪಂದವನ್ನು ರದ್ದು ಮಾಡಲಾಯಿತು. ಆದರೆ, ಪಾಕಿಸ್ತಾನವು ತನ್ನ ಮೇಲಿನ ಎಲ್ಲ ಆರೋಪಗಳನ್ನು ಅಲ್ಲಗಳೆಯಿತು

l ಏ 24: ಪಾಕಿಸ್ತಾನಿ ನಾಗರಿಕರಿಗೆ ಭಾರತವು ನೀಡಿದ್ದ ಮತ್ತು ಪಾಕಿಸ್ತಾನವು ಭಾರತದ ನಾಗರಿಕರಿಗೆ ನೀಡಿದ್ದ ವೀಸಾವನ್ನು ಪರಸ್ಪರ ರದ್ದು ಮಾಡಲಾಯಿತು. ಭಾರತದ ಎಲ್ಲ ವಿಮಾನ ಹಾರಾಟಕ್ಕೆ ಪಾಕಿಸ್ತಾನವು ತನ್ನ ವಾಯು ಮಾರ್ಗವನ್ನು ಮುಚ್ಚಿತು

l ಏ 25: ‘ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಹಾಗೂ ಭಾರತದ ಸೈನಿಕರ ಮಧ್ಯೆ ಗುಂಡಿನ ದಾಳಿಗಳು ನಡೆದಿವೆ’ ಎಂದು ಭಾರತವು ಹೇಳಿತು. ಗುಂಡಿನ ದಾಳಿಗಳು ಹಲವು ದಿನಗಳವರೆಗೆ ನಡೆಯಿತು

l ಮೇ 3: ಪಾಕಿಸ್ತಾನವು ಭಾರತದ ಮೇಲೆ ಪರೀಕ್ಷಾರ್ಥವಾಗಿ ಕ್ಷಿಪಣಿಗಳನ್ನು ಉಡಾಯಿಸಿತು. ಪಾಕಿಸ್ತಾನದ ಹಡಗುಗಳು ಭಾರತದ ಬಂದರುಗಳಿಗೆ ಬರುವುದನ್ನು ಭಾರತ ನಿಷೇಧಿಸಿತು. ಅಂತೆಯೇ ಪಾಕಿಸ್ತಾನವು ಭಾರತದ ಹಡಗುಗಳಿಗೆ ನಿಷೇಧ ಹೇರಿತು

lಮುಂದೆ ಯಾವುದೇ ಭಯೋತ್ಪಾದನಾ ಕೃತ್ಯ ನಡೆದಲ್ಲಿ ಅದನ್ನು ‘ಯುದ್ಧ ಚಟುವಟಿಕೆ’ ಎಂದೇ ಪರಿಗಣಿಸಲಾಗುವುದು ಎಂದು ಹೇಳಿದ ಭಾರತ ಸರ್ಕಾರ

lಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷ ಶಮನಗೊಂಡಿದ್ದರೂ, ಅಮಾನತುಗೊಂಡಿರುವ ಸಿಂಧೂ ಜಲ ಒಪ್ಪಂದದ ವಿಷಯದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ

l100 ಗಂಟೆಗಳಿಗಿಂತ ತುಸು ಕಡಿಮೆ ಅವಧಿಯಷ್ಟು ನಡೆದಿದ್ದ ಸೇನಾ ಸಂಘರ್ಷ

lಐಪಿಎಲ್ ಕ್ರಿಕೆಟ್‌ ಅನ್ನು ಆದಷ್ಟು ಬೇಗ ಮುಂದುವರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ: ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್

ವಿಕ್ರಂ ಮಿಸ್ರಿ ಹೇಳಿದ್ದೇನು?

ಭಾರತೀಯ ಕಾಲಮಾನ ಶನಿವಾರ ಸಂಜೆ 5ರಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಾಗರದ ಮೂಲಕ ಸೇನಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಪಾಕ್‌ ಈ ಒಪ್ಪಂದದ ಬೆನ್ನಲ್ಲೇ ಕದನ ವಿರಾಮವನ್ನು ಉಲ್ಲಂಘಿಸಿದೆ. ನಮ್ಮ ಸಶಸ್ತ್ರ ಪಡೆಗಳು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿವೆ

ವಿಕ್ರಂ ಮಿಸ್ರಿ, ವಿದೇಶಾಂಗ ಇಲಾಖೆಯ ಕಾರ್ಯದರ್ಶಿ

ಅಮೆರಿಕವು ರಾತ್ರಿಯೆಲ್ಲಾ ನಡೆಸಿದ ಮಾತುಕತೆಯ ಕಾರಣದಿಂದಾಗಿ ಸಂಪೂರ್ಣವಾಗಿ ಹಾಗೂ ತತ್‌ಕ್ಷಣದಿಂದಲೇ ಸಂಘರ್ಷ ಕೊನೆಗಾಣಿಸಲು ಭಾರತ–ಪಾಕ್‌ಒಪ್ಪಿಗೆ ಸೂಚಿಸಿವೆ ಎಂದು ಘೋಷಿಸುವುದಕ್ಕೆ ಅತೀವ ಖುಷಿಯಾಗುತ್ತಿದೆ. ವಿವೇಕ ಮತ್ತು ಬುದ್ಧಿಮತ್ತೆಯಿಂದ ವರ್ತಿಸಿದ್ದಕ್ಕೆ ಎರಡೂ ದೇಶಗಳನ್ನು ಅಭಿನಂದಿಸುತ್ತೇನೆ
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ
ಕಳೆದ 48 ಗಂಟೆಗಳಲ್ಲಿ ನಾನು ಮತ್ತು ಉಪಾಧ್ಯಕ್ಷ ವ್ಯಾನ್ಸ್‌ ಅವರು ಭಾರತದ ಪ್ರಧಾನಿ ಮೋದಿ, ಪಾಕಿಸ್ತಾನದ ಪ್ರಧಾನಿ ಶರೀಫ್‌ ಸೇರಿದಂತೆ ಆಯಾ ದೇಶಗಳ ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಮಾತುಕತೆ ನಡೆಸಿದೆವು. ಶಾಂತಿ ಮಾರ್ಗ ಆಯ್ಕೆ ಮಾಡಿದ ಎರಡೂ ದೇಶಗಳ ಪ್ರಧಾನಿಗಳ ನಿಲುವು ಅಭಿನಂದನಾರ್ಹ
ಮಾರ್ಕೊ ರುಬಿಯೊ,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ಗುಂಡಿನ ದಾಳಿ ಮತ್ತು ಸೇವಾ ಕಾರ್ಯಾಚರಣೆಗಳನ್ನು ನಡೆಸದಿರಲು ಭಾರತ ಮತ್ತು ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿವೆ. ಯಾವುದೇ ಸ್ವರೂಪದ ಭಯೋತ್ಪಾದನೆ ಮತ್ತು ಭಯೋತ್ಪಾದನಾ ಕೃತ್ಯಗಳ ಕುರಿತು ಭಾರತದ ನಿಲುವು ಯಾವಾಗಲೂ ಅಚಲ ಮತ್ತು ಈ ಬಗ್ಗೆ ರಾಜಿ ಇಲ್ಲ. ನಮ್ಮ ನಿಲುವು ಮುಂದೆಯೂ ಹೀಗೇ ಇರಲಿದೆ
ಎಸ್‌. ಜೈಶಂಕರ್, ಭಾರತದ ವಿದೇಶಾಂಗ ಸಚಿವ
ತಕ್ಷಣದಿಂದಲೇ ಜಾರಿಯಾಗುವಂತೆ ಪಾಕಿಸ್ತಾನ ಮತ್ತು ಭಾರತ ಸಂಘರ್ಷ ಶಮನಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ಎಂದಿಗೂ ಶಾಂತಿಗಾಗಿ ಮತ್ತು ದೇಶದ ಭದ್ರತೆಗಾಗಿ ಹೋರಾಡುತ್ತಲೇ ಬಂದಿದೆ. ಈ ಹೋರಾಟದಲ್ಲಿ ಎಂದಿಗೂ ನಾವು ನಮ್ಮ ಸಾರ್ವಭೌಮತ್ವ ಮತ್ತು ದೇಶದ ಸಮಗ್ರತೆಯ ಕುರಿತು ರಾಜಿ ಮಾಡಿಕೊಂಡಿಲ್ಲ
ಇಶಾಕ್‌ ಡಾರ್‌, ಪಾಕಿಸ್ತಾನ ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.