ಒಮರ್ ಅಬ್ದುಲ್ಲಾ
– ಪಿಟಿಐ ಚಿತ್ರ
ಶ್ರೀನಗರ: ಜಮ್ಮು ಸೇರಿದಂತೆ ವಿವಿಧ ನಗರಗಳಲ್ಲಿ ಗುರುವಾರ ರಾತ್ರಿ ನಡೆಸಿದ ಡ್ರೋನ್ ದಾಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಈ ನಡುವೆ ಜಮ್ಮುವಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಧಾವಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಗುರುವಾರ ರಾತ್ರಿ ಪಾಕಿಸ್ತಾನ ಜಮ್ಮು , ಪಠಾಣ್‌ಕೋಟ್, ಉಧಂಪುರ ಸೇರಿದಂತೆ ಇತರೆ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಪ್ರಯತ್ನ ನಡೆಸಿತ್ತು. ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಘಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಕಾಶ್ಮೀರದ ಎಲ್ಲಾ ಶಾಲೆಗಳಿಗೆ ಸೋಮವಾರದವರೆಗೆ ರಜೆ ಘೋಷಿಸಲಾಗಿದ್ದು, ಪರಿಸ್ಥಿತಿ ಅವಲೋಕಿಸಿ ರಜಾ ಅವಧಿಯನ್ನು ವಿಸ್ತರಿಸಬೇಕೇ? ಎಂಬುವುದರ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಅಬ್ದುಲ್ಲಾ ಹೇಳಿದ್ದಾರೆ.
ಪರಿಸ್ಥಿತಿ ಹದಗೆಟ್ಟಿರುವ ಕಾರಣ ಸೋಮವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಸಚಿವೆ ಸಕಿನಾ ಇಟೂ ತಿಳಿಸಿದ್ದರು.
ಗುರುವಾರ ರಾತ್ರಿ ಅಖ್ನೂರ್, ಸಾಂಬಾ, ಬಾರಾಮುಲ್ಲಾ ಮತ್ತು ಕುಪ್ವಾರಾ ಸೇರಿದಂತೆ ಹಲವು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿವೆ.
ಪಾಕಿಸ್ತಾನದ ಪ್ರಯತ್ನಗಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಜನರ ಸುರಕ್ಷತೆಗಾಗಿ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.