ADVERTISEMENT

ಕೋವಿಡ್‌| ಭಾರತದ ಹೋರಾಟದಲ್ಲಿ ನಾವೂ ಸೇರುತ್ತೇವೆ: ಪಾಕ್‌ ವಲಸಿಗ ಹಿಂದು ವೈದ್ಯರು

ಪಿಟಿಐ
Published 19 ಏಪ್ರಿಲ್ 2020, 2:29 IST
Last Updated 19 ಏಪ್ರಿಲ್ 2020, 2:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ:ಕೊರೊನಾ ವೈರಸ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು ಎಂದು ಪಾಕಿಸ್ತಾನದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಪಾಕ್‌ ಮೂಲದ ವಲಸಿಗ ವೈದ್ಯರ ಗುಂಪು ಭಾರತ ಸರ್ಕಾರವನ್ನು ಕೋರಿದೆ.

ವಿದೇಶದ ವೈದ್ಯರು ಅಥವಾ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಭಾರತದಲ್ಲಿ ವೈದ್ಯ ವೃತ್ತಿ ನಡೆಸಬೇಕಿದ್ದರೆ, ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ನಡೆಸುವ ಪರೀಕ್ಷೆ ಬರೆದು ಪಾಸಾಗಬೇಕು. ಅದನ್ನು ಬರೆಯದೇ, ಭಾರತದಲ್ಲಿ ವೈದ್ಯ ವೃತ್ತಿ ಮಾಡಲು ಅವಕಾಶಗಳಿಲ್ಲ.

‘ಆದರೆ, ಕೊರೊನಾ ವೈರಸ್‌ (ಕೋವಿಡ್‌–19) ಮಹಾಮಾರಿ ಸಾಂಕ್ರಾಮಿಕಗೊಳ್ಳುತ್ತಿರುವ ಈ ಪರಿಸ್ಥಿತಿಯಲ್ಲಿ ಎಂಸಿಐ ಪರೀಕ್ಷೆಯಿಂದ ನಮಗೆ ವಿನಾಯಿತಿ ನೀಡಬೇಕು ಮತ್ತು ಕೋವಿಡ್‌ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ನಮಗೂ ಅವಕಾಶ ನೀಡಬೇಕು,’ ಎಂದು ಪಾಕಿಸ್ತಾನ ಮೂಲದ ಹಿಂದೂ ವೈದ್ಯರ ತಂಡ ಕೋರಿದೆ.

ADVERTISEMENT

ವಿದೇಶದಿಂದ ವೈದ್ಯಕೀಯ ಶಿಕ್ಷಣ ಪಡೆದು ಬಂದ ಭಾರತದ ನಾಗರಿಕರಿಗೆ ಇಲ್ಲಿನ ಎಂಸಿಐ ಪರೀಕ್ಷೆ ಹೊರತಾಗಿಯೂ ವೈದ್ಯಕೀಯ ವೃತ್ತಿ ನಡೆಸಲು ಅನುಮತಿ ನೀಡಲಾಗುತ್ತದೆ. ಆದರೆ, ನಾವು ಪಾಕಿಸ್ತಾನ ಮೂಲದವರಾಗಿರುವುದರಿಂದ ನಮಗೆ ಆ ಅವಕಾಶವೂ ಇಲ್ಲ ಎನ್ನುತ್ತಾರೆ 20 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ ಮೂಲದ, ಸಿಂಧ್‌ ಪ್ರಾಂತ್ಯದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆದು ಬಂದ ಎಂ.ಎಲ್‌ ಜಂಗಿದ್‌.

‘ಭಾರತ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ವೈದ್ಯರಾದ ನಮಗೆ ಅನುಮತಿ ನೀಡಿದರೆ, ಕೋವಿಡ್‌ 19 ಎದುರಿಸಲು ನಾವು ಸ್ವಲ್ಪ ಸಹಾಯ ಮಾಡುತ್ತೇವೆ,’ ಎಂದು ಜಂಗಿದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.