ADVERTISEMENT

2017ರಲ್ಲೇ ರಫೇಲ್‌ ಹಾರಾಟ ತರಬೇತಿ ಪಡೆದರೇ ಪಾಕಿಸ್ತಾನಿ ಪೈಲಟ್‌ಗಳು?

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 6:35 IST
Last Updated 11 ಏಪ್ರಿಲ್ 2019, 6:35 IST
ಚಿತ್ರ ಕೃಪೆ: ಡಸಾಲ್ಟ್‌ ಏವಿಯೇಷನ್‌
ಚಿತ್ರ ಕೃಪೆ: ಡಸಾಲ್ಟ್‌ ಏವಿಯೇಷನ್‌   

ನವದೆಹಲಿ: ಭಾರತಕ್ಕೆ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಸಂಸ್ಥೆಯು 2017ರಲ್ಲಿ ಕತಾರ್‌ನ ವಾಯುಪಡೆಯ ತಂಡಕ್ಕೆ ನೀಡಿದ್ದ ರಫೇಲ್‌ ಹಾರಾಟತರಬೇತಿಯಲ್ಲಿ ಪಾಕಿಸ್ತಾನದ ಪೈಲಟ್‌ಗಳೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ವೈಮಾನಿಕ ಕ್ಷೇತ್ರದ ಕುರಿತಷ್ಟೇ ವರದಿಗಳನ್ನು ಪ್ರಕಟಿಸುವ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಸುದ್ದಿ ಸಂಸ್ಥೆainonline.com ಫೆ.13ರಂದು ಈ ಕುರಿತುವರದಿಯೊಂದನ್ನು ಪ್ರಕಟಿಸಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಸಂಸ್ಥೆಯು 2019ರ ಫೆ.6ರಂದು ಕತಾರ್‌ಗೆ ರಫೇಲ್‌ ಯುದ್ಧ ವಿಮಾನಗಳನ್ನು ಪೂರೈಸಿದ್ದು, ಇದಕ್ಕೂ ಮೊದಲು 2017ರಲ್ಲಿ ಕತಾರ್‌ನ ವಾಯುಸೇನೆಯ ತಂಡಕ್ಕೆ ನೀಡಿದ ರಫೇಲ್‌ ಹಾರಾಟ ತರಬೇತಿಯಲ್ಲಿ ಪಾಕಿಸ್ತಾನಿ ಪೈಲಟ್‌ಗಳು (ಎಕ್ಸ್‌ಚೇಂಜಿಂಗ್‌ ಆಫಿಸರ್‌ಗಳು) ತರಬೇತಿ ಪಡೆದು ಬಂದಿದ್ದಿದಾರೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಪಾಕಿಸ್ತಾನದ ರಕ್ಷಣಾ ಇಲಾಖೆಯು ಬುಧವಾರ ಪ್ರಸ್ತಾಪಿಸುವ ಮೂಲಕ ಸದ್ಯ ಈ ಸಂಗತಿ ಬಹಿರಂಗವಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಸಾಲ್ಟ್‌ ಏವಿಯೇಷನ್ಸ್‌ನ ಭಾರತೀಯ ಕಾರ್ಯನಿರ್ವಾಹಕರು, ‘ಈ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನಮಗೆ ಯಾವುದೇ ಮಾಹಿತಿಯೂ ಇಲ್ಲ,’ ಎಂದು ಹೇಳಿರುವುದಾಗಿ ರಾಷ್ಟ್ರೀಯ ಆಂಗ್ಲ ವಾಹಿನಿ ಎನ್‌ಡಿಟಿವಿ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ.

ADVERTISEMENT

ಭಾರತದಂತೆಯೇ ಕತಾರ್‌ ಕೂಡ ಫ್ರಾನ್ಸ್‌ನೊಂದಿಗೆ ರಫೇಲ್‌ ಯುದ್ಧ ವಿಮಾನ ಒಪ್ಪಂದ ಮಾಡಿಕೊಂಡಿದ್ದು, ಇದೇ ವರ್ಷ ಫೆಬ್ರುವರಿಯಲ್ಲಿ ಯುದ್ಧ ವಿಮಾನಗಳನ್ನು ಪಡೆದುಕೊಂಡಿದೆ. 2015ರ ಮೇನಲ್ಲಿ ಕತಾರ್‌ 24 ವಿಮಾನಗಳಿಗಾಗಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ಗೆ ಬೇಡಿಕೆ ಸಲ್ಲಿಸಿತ್ತು. 2017ರ ಡಿಸೆಂಬರ್‌ನಲ್ಲಿ 12 ಹೆಚ್ಚುವರಿ ವಿಮಾನಗಳಿಗಾಗಿ ಒಪ್ಪಂದ ಮಾಡಿಕೊಂಡಿತ್ತು. ಮೊದಲ 24 ವಿಮಾನಗಳ ಒಪ್ಪಂದದ ಮೊತ್ತ 6.3 (₹4,900 ಕೋಟಿ) ಬಿಲಿಯನ್‌ ಡಾಲರ್‌ ಎನ್ನಲಾಗಿದೆ.

ಕತಾರ್‌ನ ಪೈಲಟ್‌ಗಳಿಗೆ ಡಸಾಲ್ಟ್‌ ಸಂಸ್ಥೆ 2017ರಲ್ಲಿ ತರಬೇತಿ ನೀಡಿದೆ ಎನ್ನಲಾಗಿದ್ದು, ಈ ತಂಡದಲ್ಲಿ ಮಿಲಿಟರಿ ಯುದ್ಧ ತಂತ್ರ ವಿನಿಮಯ ಒಪ್ಪಂದದ ಆಧಾರದ ಮೇಲೆ ಪಾಕಿಸ್ತಾನಿ ಪೈಲಟ್‌ಗಳೂ ಇದ್ದರು ಎಂಬುದು ಸದ್ಯದ ಚರ್ಚಿತ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.