ADVERTISEMENT

ಉಗ್ರರ ಶಿಬಿರ ಮತ್ತೆ ಸಕ್ರಿಯ?

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 3:50 IST
Last Updated 11 ಆಗಸ್ಟ್ 2019, 3:50 IST
   

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ(ಪಿಒಕೆ) ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಭಯೋತ್ಪಾದಕರ ಶಿಬಿರಗಳನ್ನು ಮತ್ತೆ ಸಕ್ರಿಯಗೊಳಿಸಲು ಪಾಕಿಸ್ತಾನ ಮುಂದಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

‘ಭಾರತದ ಗಡಿಯಲ್ಲಿ ಶೆಲ್ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿ, ಭಯೋತ್ಪಾದಕರನ್ನು ಜಮ್ಮು ಕಾಶ್ಮೀರದ ಒಳಗೆ ನುಸುಳುವಂತೆ ಪಾಕಿಸ್ತಾನದ ಸೇನೆ ಪ್ರೋತ್ಸಾಹಿಸುತ್ತಿರಬಹುದು ಎಂಬ ಸಂದೇಹ ಗಡಿಯಲ್ಲಿನ ಉಗ್ರರ ಚಲನವಲನಗಳನ್ನು ಗಮನಿಸಿದಾಗ ಮೂಡುತ್ತಿದೆ. ನೂರಾರು ಸಂಖ್ಯೆಯಲ್ಲಿ ಸಕ್ರಿಯರಾಗಿರುವ ಭಯೋತ್ಪಾದಕರು ಗಡಿಯಲ್ಲಷ್ಟೇ ಅಲ್ಲ, ಒಳನಾಡಿನಲ್ಲಿಯೂ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ’ ಎಂದು ಗುಪ್ತಚರ ಮಾಹಿತಿ ಉಲ್ಲೇಖಿಸಿದೆ.

‘‍ಪಾಕಿಸ್ತಾನವು ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿ, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗಡಿ ಕಾರ್ಯಪಡೆಯ (ಬಾರ್ಡರ್ ಆ್ಯಕ್ಷನ್ ಫೋರ್ಸ್) ಮೂಲಕ ಕಾರ್ಯಾಚರಣೆ ನಡೆಸಬಹುದು. ಎಲ್‌ಒಸಿಯ ಪಿರ್ ಪಂಜಾಲ್ ವಲಯದ 28 ಜಾಗಗಳಿಂದ ದಾಳಿ ನಡೆಯಬಹುದು’ ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ADVERTISEMENT

‘ಭಾರತದಲ್ಲಿ ಪುಲ್ವಾಮಾ ರೀತಿಯ ದಾಳಿ ಮತ್ತೆ ನಡೆದರೆ ನಾವು ಹೊಣೆಯಲ್ಲ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

‘ಜೈಷ್, ಲಷ್ಕರ್ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಇತರ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲುಪಾಕ್ ಪ್ರಧಾನಿಯ ಹೇಳಿಕೆಯಿಂದ ಮುಕ್ತ ಅನುಮತಿ ಸಿಕ್ಕಂತಾಗಿದೆ. ಪಾಕ್ ಸೇನೆಯ ನೆರವಿನೊಂದಿಗೆ ಗಡಿಯಲ್ಲಿ ಉಗ್ರರ ಶಿಬಿರ ಮತ್ತೆ ಕ್ರಿಯಾಶೀಲಗೊಂಡಿವೆ ಎಂಬ ಸೂಚನೆಯನ್ನು ಇದು ನೀಡುತ್ತಿದೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ
ಪಟ್ಟಿದ್ದಾರೆ.

ಕಣಿವೆಯಲ್ಲಿ ಠಿಕಾಣಿ ಹೂಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಗಡಿಭದ್ರತಾ ಪಡೆ ಜತೆ ಚರ್ಚೆ ನಡೆಸಿದ್ದಾರೆ.

ಪ್ಯಾರಿಸ್‌ನ ಅಂತರ್ ಸರ್ಕಾರಿ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ವಿಧಿಸಿದ್ದ 2019ರ ಮೇ ಗಡುವಿನ ಕಾರಣಪಿಒಕೆಯ
ಎಲ್ಲ ಭಯೋತ್ಪಾದಕ ಶಿಬಿರ, ಕಚೇರಿಗಳನ್ನು ಪಾಕ್ ಮುಚ್ಚಿಸಿತ್ತು. ಹೀಗಾಗಿ ಈ ವರ್ಷ ಎಲ್‌ಒಸಿಯಲ್ಲಿ ಒಳನುಸುಳುವಿಕೆ ಪ್ರಕರಣ ದಾಖಲಾಗಿಲ್ಲ. 3 ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಒಳನುಸುಳುವಿಕೆ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.