ADVERTISEMENT

ವೈಮಾನಿಕ ದಾಳಿಯಲ್ಲಿ ವಿಮಾನ ಹೊಡೆದುರುಳಿಸಿರುವ ಭಾರತದ ವಾದ ಆಧಾರರಹಿತ: ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 10:48 IST
Last Updated 23 ನವೆಂಬರ್ 2021, 10:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: 2019ರ ಫೆಬ್ರವರಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಭಾರತದ ಪೈಲಟ್‌ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ್ದಾರೆ ಎಂಬ ಭಾರತದ ನಿಲುವನ್ನು ಪಾಕಿಸ್ತಾನ ಮಂಗಳವಾರ ತಿರಸ್ಕರಿಸಿದೆ. ಇದು ಆಧಾರ ರಹಿತವಾದುದು ಎಂದೂ ಅದು ಹೇಳಿದೆ.

2019ರ ಫೆಬ್ರವರಿ 27 ರಂದು ವೈಮಾನಿಕ ದಾಳಿಯಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದ ಅಭಿನಂದನ್‌ ವರ್ಧಮಾನ್‌ (ಈಗ ಗ್ರೂಪ್‌ ಕ್ಯಾಪ್ಟನ್‌) ಅವರನ್ನು ಪಾಕಿಸ್ತಾನ ವಶಕ್ಕೆ ಪಡೆಯುವ ಮುನ್ನ ಅವರು ತಮ್ಮ ಮಿಗ್‌–21 ರಿಂದ ಪಾಕಿಸ್ತಾನದ ಎಫ್‌–16 ಜೆಟ್‌ ವಿಮಾನವನ್ನು ಹೊಡೆದುರುಳಿಸಿದ್ದರು.

ಅಭಿನಂದನ್‌ ಅವರನ್ನು ಮಾರ್ಚ್‌ 1ರ ಮಧ್ಯರಾತ್ರಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಕರ್ತವ್ಯ ಪ್ರಜ್ಞೆಯನ್ನು ಮೆರೆದ ಅವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸೋಮವಾರ ವೀರ ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ADVERTISEMENT

‘2019ರ ಫೆಬ್ರವರಿಯಲ್ಲಿ ಭಾರತದ ಪೈಲಟ್‌ವೊಬ್ಬರು ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾರೆ ಎಂಬ ಭಾರತದ ಸಂಪೂರ್ಣ ಆಧಾರ ರಹಿತ ವಾದವನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸುತ್ತದೆ’ ಎಂದು ವಿದೇಶಾಂಗ ಖಾತೆಯ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಅಂತರರಾಷ್ಟ್ರೀಯ ತಜ್ಞರು ಮತ್ತು ಅಮೆರಿಕ ಅಧಿಕಾರಿಗಳು ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳ ಲೆಕ್ಕವನ್ನು ಪಡೆದ ನಂತರ ಆ ದಿನ ಯಾವುದೇ ಎಫ್‌–16 ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಈಗಾಗಲೇ ದೃಢಪಡಿಸಿದ್ದಾರೆ’ ಎಂದು ಕಚೇರಿ ಹೇಳಿದೆ.

‘ಭಾರತದ ಹಗೆತನ ಮತ್ತು ಆಕ್ರಮಣಕಾರಿ ನೀತಿಯ ಹೊರತಾಗಿಯೂ ಪೈಲಟ್‌ ಬಿಡುಗಡೆ ಪಾಕಿಸ್ತಾನದ ಶಾಂತಿ ಬಯಕೆಗೆ ಸಾಕ್ಷಿಯಾಗಿದೆ’ ಎಂದೂ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.