ಸಾಂಕೇತಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಲಷ್ಕರ್ ಎ ತಯಬಾ (ಎಲ್‌ಇಟಿ) ಮತ್ತು ಜೈಷ್ –ಇ– ಮೊಹಮ್ಮದ್ (ಜೆಇಎಂ) ಸೇರಿದಂತೆ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನದ ನೆಲದಿಂದಲೇ ಹಣಕಾಸಿನ ನೆರವು ದೊರೆಯುತ್ತಿದೆ ಎಂಬ ಭಾರತದ ಆರೋಪವನ್ನು ಪುಷ್ಟೀಕರಿಸುವಂತಹ ವರದಿಯನ್ನು ಹಣದ ಅಕ್ರಮ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ವಿಚಕ್ಷಣಾ ಸಂಸ್ಥೆ ಎಫ್‌ಎಟಿಎಫ್ ನೀಡಿದೆ.
‘ಭಯೋತ್ಪಾದಕರಿಗೆ ದೊರಕುತ್ತಿರುವ ಆರ್ಥಿಕ ನೆರವಿಗೆ ಸಂಬಂಧಿಸಿದ ಸಮಗ್ರ ಮಾಹಿತಿ’ ಎಂಬ ವರದಿಯಲ್ಲಿ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್‌ಫೋರ್ಸ್ (ಎಫ್‌ಎಟಿಎಫ್), ‘ಎಲ್‌ಇಟಿ ಮತ್ತು ಜೆಇಎಂ ಸರ್ಕಾರಿ ಪ್ರಾಯೋಜಿತ ಚಟುವಟಿಕೆಗಳ ಫಲಾನುಭವಿಗಳಾಗಿವೆ’ ಎಂದು ಹೇಳಿದೆ. ಈ ಎರಡೂ ಸಂಘಟನೆಗಳು ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿವೆ.
‘ಕೆಲವು ಭಯೋತ್ಪಾದಕ ಸಂಘಟನೆಗಳು ಕೆಲವು ರಾಷ್ಟ್ರಗಳ ಸರ್ಕಾರಗಳಿಂದ ನಿರಂತರವಾಗಿ ಆರ್ಥಿಕ ಮತ್ತು ಇತರ ನೆರವನ್ನು ಪಡೆಯುತ್ತಿವೆ ಎಂಬುದು ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳು ಹಾಗೂ ವಿವಿಧ ನಿಯೋಗಗಳು ಒದಗಿಸಿದ ಮಾಹಿತಿಗಳಿಂದ ದೃಢಪಟ್ಟಿದೆ’ ಎಂದು ಎಫ್‌ಎಟಿಎಫ್ ವರದಿಯಲ್ಲಿ ಹೇಳಿದೆ.
ಪಾಕಿಸ್ತಾನವು ಭಯೋತ್ಪಾದನೆಯನ್ನು ನೇರವಾಗಿ ಪ್ರಾಯೋಜಿಸುತ್ತಿದೆ ಎಂದು ಎಫ್‌ಎಟಿಎಫ್ ನೇರವಾಗಿ ಹೇಳಿಲ್ಲ. ಆದರೆ, ಈ ಆರೋಪವನ್ನು ಪುಷ್ಟೀಕರಿಸುವಂತಹ ಪರೋಕ್ಷವಾದ ಸುಳಿವುಗಳನ್ನು ವರದಿಯಲ್ಲಿ ಹಂಚಿಕೊಂಡಿದೆ. ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ಪಾಕಿಸ್ತಾನವನ್ನು ‘ಬೂದು ಪಟ್ಟಿ’ಗೆ ಸೇರಿಸಬೇಕೆಂದು ಭಾರತ ಮಾಡುತ್ತಿರುವ ವಾದಕ್ಕೆ ಈ ವರದಿ ಮತ್ತಷ್ಟು ಬಲ ತುಂಬುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.