ADVERTISEMENT

ಪಾಕಿಸ್ತಾನದ ಡ್ರೋನ್‌ ಹಾರಾಟ: ಹಿಮ್ಮೆಟ್ಟಿಸಿದ ಸೇನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 17:26 IST
Last Updated 30 ಜನವರಿ 2026, 17:26 IST
ಡ್ರೋನ್‌ (ಸಾಂದರ್ಭಿಕ ಚಿತ್ರ)
ಡ್ರೋನ್‌ (ಸಾಂದರ್ಭಿಕ ಚಿತ್ರ)   

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾಡ ಜಿಲ್ಲೆಯ ಕೆರನ್‌ ವಲಯದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸಮೀಪ ಗುರುವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ಗಳು ಹಾರಾಟ ನಡೆಸಿದ್ದು, ಭಾರತೀಯ ಸೇನೆಯು ಗುಂಡು ಹಾರಿಸುವ ಮೂಲಕ ಹಿಮ್ಮೆಟ್ಟಿಸಿದೆ.

‘ಈ ವಲಯದಲ್ಲಿ ಶಸ್ತ್ರಾಸ್ತ್ರ ಅಥವಾ ನಿಷೇಧಿತ ವಸ್ತುಗಳನ್ನು ಬೀಳಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಒಳನುಸುಳುವಿಕೆ ಹಾಗೂ ಡ್ರೋನ್‌ ಚಟುವಟಿಕೆಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಯೋಧರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೆರನ್ ವಲಯವು ಒಳನುಸುಳುವಿಕೆಗೆ ಸಂಬಂಧಿಸಿದಂತೆ ಸೂಕ್ಷ್ಮ ಪ್ರದೇಶವಾಗಿದೆ. ಭೂ–ಆಧಾರಿತ ಒಳನುಸುಳುವಿಕೆ ವಿರೋಧಿ ವ್ಯವಸ್ಥೆಯನ್ನು ತಪ್ಪಿಸಲು ಗಡಿಯಾಚೆಯಿಂದ ಡ್ರೋನ್‌ಗಳ ಬಳಕೆ ಹೆಚ್ಚಾಗಿದೆ. ಇದು ಅವರ ತಂತ್ರಗಳಲ್ಲಿನ ಬದಲಾವಣೆಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ, ಅಂತರರಾಷ್ಟ್ರೀಯ ಗಡಿಯಲ್ಲಿ (ಐ.ಬಿ) ಡ್ರೋನ್‌ಗಳ ಬಳಕೆ ಹೆಚ್ಚಾಗಿರುವುದು ಹೊಸ ಹಾಗೂ ಸಂಕೀರ್ಣ ಭದ್ರತಾ ಸವಾಲು ಎದುರಾಗಿರುವುದನ್ನು ಎತ್ತಿ ತೋರಿಸುತ್ತದೆ. ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ 221 ಕಿ.ಮೀ. ಐ.ಬಿ ಮತ್ತು 740 ಕಿ.ಮೀ. ಎಲ್‌ಒಸಿ ಜಮ್ಮು ಮತ್ತು ಕಾಶ್ಮೀರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.