ADVERTISEMENT

ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

ಏಜೆನ್ಸೀಸ್
ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2026, 7:50 IST
Last Updated 25 ಜನವರಿ 2026, 7:50 IST
<div class="paragraphs"><p>ಪಲಾಶ್ ಮುಚ್ಛಲ್</p></div>

ಪಲಾಶ್ ಮುಚ್ಛಲ್

   

ಚಿತ್ರಕೃಪೆ: Instagram / palash_muc

ಮುಂಬೈ: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿದ್ಯಾನ್‌ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್‌ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ADVERTISEMENT

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಪಲಾಶ್‌, 'ನನ್ನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು, ಅತಿರೇಕ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವ ಸಾಂಗ್ಲಿ ಮೂಲದ ವಿದ್ಯಾನ್‌ ಮಾನೆ ಅವರಿಗೆ, ನನ್ನ ವಕೀಲ ಶ್ರೇಯನ್ಶ್‌ ಮಿಥಾರೆ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಸಂಬಂಧ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಸಾಂಗ್ಲಿ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿದ್ದ ಮಾನೆ, ಗಾಯಕ ಪಲಾಶ್‌ ಅವರಿಂದ ₹ 40 ಲಕ್ಷ ವಂಚನೆಗೊಳಗಾಗಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರೇ ಮಾಹಿತಿ ನೀಡಿದ್ದರು.

ಪಲಾಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸಾಂಗ್ಲಿಯ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಮಾನೆ ಮಂಗಳವಾರ (ಜ.20) ಭೇಟಿಯಾಗಿದ್ದರು.

ಪಲಾಶ್‌ ಅವರು ಸಾಂಗ್ಲಿಯಲ್ಲಿ 2023ರ ಡಿಸೆಂಬರ್ 5ರಂದು ತಮ್ಮನ್ನು ಭೇಟಿಯಾಗಿದ್ದರು. ಅವರ 'ನಝಾರಿಯಾ' ಸಿನಿಮಾಗೆ ಬಂಡವಾಳ ಹಾಕುವಂತೆ ಕೇಳಿದ್ದರು. ಸಿನಿಮಾದಲ್ಲಿ ಪಾತ್ರ ನೀಡುವುದಾಗಿಯೂ ಹೇಳಿದ್ದರು. ಅದರಂತೆ, ₹ 40 ಲಕ್ಷ ಹೂಡಿಕೆ ಮಾಡಿದ್ದೆ. ಆದಾಗ್ಯೂ, ಸಿನಿಮಾ ಪೂರ್ಣಗೊಳ್ಳಲಿಲ್ಲ. ಹೀಗಾಗಿ, ಹಣ ವಾಪಸ್‌ ಮಾಡುವಂತೆ ಕೋರಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾನೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಇದೇ ವಿಚಾರವಾಗಿ ಪಲಾಶ್ ಅವರು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮುರಿದು ಬಿದ್ದ ಮದುವೆ

ಪಲಾಶ್‌ ಮುಚ್ಛಲ್‌ ಅವರ ಮದುವೆ ಭಾರತದ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರೊಂದಿಗೆ 2025ರ ನವೆಂಬರ್‌ 23ರಂದು ನಿಗದಿಯಾಗಿತ್ತು. ಅದರಂತೆ, ನವೆಂಬರ್‌ 21ರಂದು  ನಿಶ್ಚಿತಾರ್ಥ ನಡೆದಿತ್ತು. ವಿವಾಹಪೂರ್ವ ಕಾರ್ಯಕ್ರಮಗಳೆಲ್ಲವೂ ಅದ್ಧೂರಿಯಾಗಿಯೇ ನಡೆದಿದ್ದವು. ಆದರೆ, ಆ ನಂತರ ಅನಿರೀಕ್ಷಿತ ಬೆಳವಣಿಗೆಗಳಾದವು.

ಸ್ಮೃತಿ ಅವರ ತಂದೆ ಶ್ರೀನಿವಾಸ್‌ ಅವರಿಗೆ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಕಾರಣಕ್ಕೆ, ವಿವಾಹ ದಿನಾಂಕವನ್ನು ಮುಂದೂಡಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ನಂತರ, ವಿವಾಹ ರದ್ದಾಗಿದೆ ಎಂದು ಮಂದಾನ ಸ್ಪಷ್ಟನೆ ನೀಡಿದ್ದರು.

ಅದರ ಬೆನ್ನಲ್ಲೇ, ಈ ಇಬ್ಬರ ಸಂಬಂಧದ ಕುರಿತು ಹಲವು ವದಂತಿಗಳು ಹರಡಿದ್ದವು. ಪಲಾಶ್‌ ಅವರಿಗೆ ಮತ್ತೊಬ್ಬರೊಂದಿಗೆ ಸಂಬಂಧವಿದೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ, ಆ ಯಾವುದಕ್ಕೂ ಸ್ಮೃತಿ ಅಥವಾ ಪಲಾಶ್‌ ಕಡೆಯಿಂದ; ಇಲ್ಲವೇ, ಇಬ್ಬರ ಮನೆಯವರಿಂದ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.