ADVERTISEMENT

ಶಿವಸೇನೆ ಮುಖಂಡನ ಹತ್ಯೆ: ಸಹೋದರನ ಬಂಧನ

ಕೊಲೆಯಾದ ಐದು ತಿಂಗಳ ಬಳಿಕ ಪ್ರಮುಖ ಆರೋಪಿಯ ಸೆರೆ

ಪಿಟಿಐ
Published 8 ಜೂನ್ 2025, 15:42 IST
Last Updated 8 ಜೂನ್ 2025, 15:42 IST
.
.   

ಪಾಲ್ಘರ್‌: ಶಿವಸೇನೆ ಮುಖಂಡ ಅಶೋಕ್‌ ಧೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅವಿನಾಶ್‌ ಧೋಡಿ ಬಂಧಿತ. ಐದು ತಿಂಗಳಿನಿಂದಲೂ ನಾಪತ್ತೆಯಾಗಿದ್ದ ಈತನನ್ನು ಮೊರ್ಖಲ್‌ನಲ್ಲಿ ಬಂಧಿಸಲಾಗಿದೆ. ಈತ ಕೊಲೆಯಾದ ಅಶೋಕ್‌ ಅವರ ಸಹೋದರ ಎಂದು ಪಾಲ್ಘರ್‌ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ದೇಶ್‌ಮುಖ್‌ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್‌ ಹವೇಲಿಯ ಸಿಲವಾಸಾದಿಂದ ಅಶೋಕ್‌ ಧೋಡಿ ಜ. 19ರಂದು ನಾಪತ್ತೆಯಾಗಿದ್ದರು. ನೆರೆಯ ಗುಜರಾತ್‌ನ ನೀರು ತುಂಬಿದ್ದ ಕ್ವಾರಿಯೊಂದರಲ್ಲಿ ಪತ್ತೆಯಾದ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

ADVERTISEMENT

ಅಶೋಕ್‌ ಧೋಡಿ ತನ್ನ ಮನೆಯ ಗುತ್ತಿಗೆಯನ್ನು ರದ್ದುಗೊಳಿಸುವಂತೆ ವೇವ್ಜಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದು ಅವಿನಾಶ್‌ ಅವರನ್ನು ಕೆರಳಿಸಿತ್ತು. ದಹನುವಿಂದ ಮನೆಗೆ ಮರಳುತ್ತಿದ್ದ ಅಶೋಕ್‌ನನ್ನು ವೇವ್ಜಿ ಘಾಟ್‌ನಲ್ಲಿ ಅಪಹರಿಸಿ, ಕೊಲೆ ಮಾಡಲಾಗಿತ್ತು. ಶವದ ಸಮೇತ ಕಾರನ್ನು ಗುಜರಾತ್‌ನ ಸರೀಗಾಮ್‌ ವಾಡಿಯಾಪಾಡದ ನೀರು ತುಂಬಿದ ಕ್ವಾರಿಗೆ ಅವಿನಾಶ್‌ ಉರುಳಿಸಿದ್ದರು. ಜನವರಿಯಲ್ಲಿ ನಡೆದಿದ್ದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಐವರನ್ನು ಬಂಧಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಶೋಧ ನಡೆದಿದೆ ಎಂದು ಎಸ್‌ಪಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.